ಚುನಾವಣೆ ಪ್ರಚಾರಕ್ಕೂ ತಟ್ಟಿದ ಬಿಸಿಲಿನ ಬಿಸಿ: ಬೆಳಗ್ಗೆ, ಸಂಜೆ ಸಮಾವೇಶ ನಡೆಸಲು ಚಿಂತನೆ!
ಚಿಕ್ಕಬಳ್ಳಾಪುರ ಮಾರ್ಚ್ 31: ಒಂದೆಡೆ ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಬೇಸಿಗೆ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಹಾಗೂ ರಾಜಕೀಯ ಮುಖಂಡರ ತಲೆಬಿಸಿ ಹೆಚ್ಚು ಮಾಡಿದೆ.
ಬೇಸಿಗೆ ಮಧ್ಯದಲ್ಲಿಯೇ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಬಿಸಿಲಿನ ತಾಪಮಾನ ಜನರನ್ನು ವಿಲಿವಿಲಿ ಒದ್ದಾಡುವಂತೆ ಮಾಡಿದೆ. ಈ ನಡುವೆ ಹವಾಮಾನ ಇಲಾಖೆ ರಾಜ್ಯದಲ್ಲಿ ಬಿಸಿಲಿನ ತಾಪ ಇನ್ನೂ ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಪ್ರಚಾರ ನಡೆಸುವುದು ಹೇಗೆ? ಜನರನ್ನು ಸೇರಿಸಿ ಸಮಾವೇಶ ಮಾಡುವುದಾದರೂ ಹೇಗೆ? ಬಂದ ಜನರಿಗೆ ನೀರು, ನೆರಳಿನ ವ್ಯವಸ್ಥೆ ಮಾಡುವುದಕ್ಕಾಗಿಯೇ ಲಕ್ಷಾಂತರ ರೂ. ಖರ್ಚಾದರೆ ಹೇಗೆ ಎಂಬ ಪ್ರಶ್ನೆಗಳು ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ಯೋಜನೆ ಹಾಕಿಕೊಂಡಿರುವ ಅಭ್ಯರ್ಥಿಗಳನ್ನು ಕಾಡುತ್ತಿವೆ.
ಬಿಸಿಲಿನ ಬೇಗೆಗೆ ಬಸವಳಿದ ಜನರು, ಹವಾಮಾನ ಇಲಾಖೆ ಎಚ್ಚರಿಕೆಯಿಂದ ಮತ್ತಷ್ಟು ಹೆದರಿಕೊಂಡಿದ್ದಾರೆ. ಏನೇ ಕೆಲಸ ಇದ್ದರೂ ಮಧ್ಯಾಹ್ನ ಮನೆ ಬಿಟ್ಟು ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದು ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.