ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಕೋರ್ಟ್ ಸಮನ್ಸ್: ಯಾಕೆ?
ಬೆಂಗಳೂರು, ಮಾರ್ಚ್ 29: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಅಪಪ್ರಚಾರ ಮಾಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಏಪ್ರಿಲ್ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಜರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆ ಸಮನ್ಸ್ ಜಾರಿ ಮಾಡಿದೆ.
ನಿಗದಿಯಂತೆ ಮಾರ್ಚ್ 28 ಗುರುವಾರ ಅವರು ಕೋರ್ಟ್ ಮುಂದೆ ಹಾಜರಾಗಬೇಕಿತ್ತು, ಆದರೆ ಅವರು ಸಮನ್ಸ್ ಸರ್ವ್ ಆಗಿಲ್ಲ ಎಂದು ಹಾಜರಾಗಿರಲಿಲ್ಲ. ಹಾಗಾಗಿ ನ್ಯಾಯಾಲಯ ಮತ್ತೆ ಸಮನ್ಸ್ ಜಾರಿ ಮಾಡಿ ಒಂದು ತಿಂಗಳ ಕಾಲಾವಕಾಶ ನೀಡಿದೆ. ಹಾಗಾಗಿ ಅವರು ಏ.29ಕ್ಕೆ ಖುದ್ದು ಹಾಜರಾಗಬೇಕು ಇಲ್ಲವೇ ವಕೀಲರ ಮೂಲಕ ಪ್ರತಿನಿಧಿಸಿ ಹಾಜರಾತಿಗೆ ವಿನಾಯಿತಿ ಪಡೆಯಬೇಕು ಎಂದು ಕೋರ್ಟ್ ತಿಳಿಸಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಪಪ್ರಚಾರ ಮಾಡಿದ್ದಾರೆಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಖಾಸಗಿ ದೂರು ನೀಡಿತ್ತು. ದೂರಿನ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಪ್ರಕರಣದ ಪ್ರತಿವಾದಿಗಳಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮಾರ್ಚ್ 28ಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.