ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳದ ಉದ್ಘಾಟನೆ ಕಂಬಳ ಕ್ರೀಡೆಯಿಂದ ರಾಜ್ಯದಲ್ಲೇ ಜಿಲ್ಲೆಗೆ ಗೌರವದ ಹೆಸರು: ಡಾ. ಪದ್ಮಪ್ರಸಾದ ಅಜಿಲರು
ವೇಣೂರು: ಕಂಬಳ ಕ್ರೀಡೆಯಿಂದ ರಾಜ್ಯದಲ್ಲೇ ದ.ಕ. ಜಿಲ್ಲೆಗೆ ಗೌರವದ ಹೆಸರು ಬಂದಿದೆ. ಕಂಬಳದ ಆಯೋಜನೆ ನಾವು ಸಲಹೆ ನೀಡಿದಷ್ಟು ಸುಲಭವಲ್ಲ. ಅನೇಕ ಸವಾಲುಗಳನ್ನು ಎದುರಿಸಿ ಸತತ 31 ವರ್ಷಗಳಿಂದ ಇಲ್ಲಿ ಕಂಬಳ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಇದು ನಿರಂತರವಾಗಿ ನಡೆದುಕೊಂಡು ಬರುವಂತಾಗಲಿ, ತುಳುನಾಡಿನ ಸಂಸ್ಕೃತಿ ಉಳಿಯಲಿ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಹೇಳಿದರು.
ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ವೇಣೂರು-ಪೆರ್ಮುಡ ಹೊನಲು ಬೆಳಕಿನ ೩೧ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವನ್ನು ಶನಿವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುದ್ದಾಡಿ ಕ್ಷೇತ್ರದ ಆಡಳಿತ ಮೊಕ್ತೇಸರ, ನಿವೃತ್ತ ಉಪನ್ಯಾಸಕ ಯಂ. ವಿಜಯರಾಜ ಅಧಿಕಾರಿ ಮಾರಗುತ್ತು ಅವರು ಮಾತನಾಡಿ, ದೇಶದ ಸಂಸ್ಕಾರ, ಸಂಸ್ಕೃತಿ ಉಳಿಯಲು ಇಂತಹ ಪಾರಂಪರಿಕ ಜಾನಪದ ಕ್ರೀಡೆಗಳ ಆಯೋಜನೆಯಿಂದ ಸಾಧ್ಯವಿದೆ. ಇಂತಹ ಪರಂಪರೆ ನಿರಂತರ ನಡೆಯುವಂತಾಗಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್ ಅವರು ಸ್ವಾಗತ ಭಾಷಣ ನೆರವೇರಿಸಿ, ನಾನು ಅಧ್ಯಕ್ಷನಾಗಿದ್ದರೂ ಎಲ್ಲರ ಸಹಕಾರದಿಂದ ಕಂಬಳ ನಡೆಯುತ್ತಿದೆ. ಮಾಜಿ ಶಾಸಕ ಕೆ. ವಸಂತ ಬಂಗೇರರವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಈ ಕಂಬಳಕ್ಕೆ ಕಾರ್ಯಾಧ್ಯಕ್ಷರಾಗಿ ಶೇಖರ ಕುಕ್ಕೇಡಿಯ ಶ್ರಮ ಬಹಳಷ್ಟಿದೆ. ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ಅನಿತಾ ಕೆ., ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಶುಭಕರ ಪೂಜಾರಿ, ಅಳದಂಗಡಿ ಪದ್ಮಾಂಬ ಕ್ಯಾಟರಿಂಗ್‌ನ ನಾಗಕುಮಾರ್ ಜೈನ್, ವೇಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಕುಕ್ಕೇಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ತೇಜಾಕ್ಷಿ, ಪ್ರಮುಖರಾದ ಭಾಸ್ಕರ ಬಲ್ಯಾಯ, ರಾಜೇಶ್ ದ್ರುವಿ, ಕಂಬಳ ತೀರ್ಪುಗಾರರಾದ ಸುನಿಲ್ ಕುಮಾರ್ ಆರಿಗ, ಮಹಾವೀರ ಜೈನ್ ಕಜೆ, ಕುಕ್ಕೇಡಿ ಹಾಲು ಉ.ಸ. ಸಂಘದ ನಿರ್ದೇಶಕ ದಯಾನಂದ ದೇವಾಡಿಗ, ರವೀಂದ್ರ ಅಮೀನ್ ಬಳಂಜ, ಸುಧೀಶ್ ಕುಮಾರ್ ಆರಿಗ, ರಮೇಶ್ ಪೂಜಾರಿ ಪಡ್ಡಾಯಿಮಜಲು, ನಿರಂಜನ ಕೆ.ಎಸ್., ನಾರಾಯಣ ಪೂಜಾರಿ ಪರಾರಿ, ಗುತ್ತಿಗೆದಾರ ರಫೀಕ್, ಶಿಲ್ಪಾ ನಿತೀಶ್ ಕೋಟ್ಯಾನ್, ಸಮಿತಿ ಉಪಾಧ್ಯಕ್ಷರಾದ ಕರುಣಾಕರ ಸಾಲ್ಯಾನ್, ಸ್ಟೀವನ್ ಮೋನಿಸ್, ಗೋಪಾಲ ಪೂಜಾರಿ, ಕೋಶಾಧ್ಯಕ್ಷ ಅಶೋಕ್ ಪಾಣೂರು, ಕಾರ್ಯದರ್ಶಿ ಭರತ್‌ರಾಜ್ ಪಾಪುದಡ್ಕ ಮತ್ತಿತರರು ಇದ್ದರು.
ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು. ಕಂಬಳ ಸಮಿತಿ ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ವಂದಿಸಿದರು.