ಎಸ್‌ಬಿಐ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್: ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಸೂಚನೆ
ನವದೆಹಲಿ : ಚುನಾವಣಾ ಬಾಂಡ್‌ಗಳ ಯೋಜನೆಯ ವಿವರಗಳನ್ನು ಬಹಿರಂಗಪಡಿಸಲು ಹೆಚ್ಚಿನ ಸಮಯವನ್ನು ನೀಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಕೋರಿಕೆಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ನಾಳೆಯೊಳಗೆ (ಮಂಗಳವಾರ) ಬ್ಯಾಂಕ್ ಭಾರತೀಯ ಚುನಾವಣಾ ಆಯೋಗದೊಂದಿಗೆ (ಇಸಿಐ) ವಿವರಗಳನ್ನು ಹಂಚಿಕೊಳ್ಳಬೇಕು ಎಂದು ಹೇಳಿದೆ. ಶುಕ್ರವಾರ ಸಂಜೆ 5 ಗಂಟೆಯೊಳಗೆ ತನ್ನ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪ್ರಕಟಿಸಲು ಚುನಾವಣಾ ಸಂಸ್ಥೆಗೆ ಸೂಚನೆ ನೀಡಲಾಗಿದೆ.
ಮಂಗಳವಾರ ಮಾಹಿತಿ ನೀಡಲು ವಿಫಲವಾದರೆ ಎಸ್‌ಬಿಐ ಬ್ಯಾಂಕ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವುದಾಗಿ ನ್ಯಾಯಾಲಯ ಖಡಕ್ಕಾಗಿ ಎಚ್ಚರಿಕೆ ನೀಡಿದೆ. ಈಗ ರದ್ದುಗೊಂಡಿರುವ ಯೋಜನೆಯ ವಿವರಗಳನ್ನು ಒದಗಿಸಲು ಹೆಚ್ಚಿನ ಸಮಯಕ್ಕಾಗಿ ಎಸ್‌ಬಿಐ ಕೋರಿಕೆಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಕಠಿಣ ಪ್ರಶ್ನೆಗಳನ್ನು ಕೇಳಿದೆ ಮತ್ತು ಕಳೆದ 26 ದಿನಗಳಿಂದ ಬ್ಯಾಂಕ್ ಏನು ಮಾಡಿದೆ ಎಂದು ಪ್ರಶ್ನೆ ಮಾಡಿದೆ. ಚುನಾವಣಾ ಬಾಂಡ್ ವಿವರ ಸಲ್ಲಿಸಲು ಜೂನ್ 30ರವರೆಗೆ ಕಾಲವಕಾಶ ನೀಡುವಂತೆ ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.