ವೇಣೂರು : ಪೊಲೀಸರ ಮೇಲೆ ಕೈ ಮಾಡಿ ಪುಂಡಾಟಿಕೆ ಮೆರೆದ ಆರೋಪಿಗಳಿಗೆ ನ್ಯಾಯಾಂಗ ಬಂಧನ
ವೇಣೂರು ; ಶಿವರಾತ್ರಿ ಹೆಸರಿನಲ್ಲಿ ಯುವಕರ ತಂಡವೊಂದು ಸಾರ್ವಜನಿಕ ರಸ್ತೆ ಮೇಲೆ ಗಾಜು ಪುಡಿ ಮಾಡಿ ಪುಂಡಾಟಿಕೆ ಮೆರೆದು ಅದನ್ನು ತಡೆದ ಪೊಲೀಸರ ಮೇಲೆಯೇ ಕೈ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಐದು ಮಂದಿ ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿಗಳು ಸ್ಥಳೀಯರಾಗಿರುವ ಮಹೇಶ್ (28), ಸುರೇಶ್ (33), ಗೌತಂ(21), ಅರುಣ್ (29) ಹಾಗೂ ಸುರೇಶ್ (28)ಎಂಬವರಾಗಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರು ಆರೋಪಿಗಳು ತಲೆಮರೆಸಿ ಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಬಂಧಿತ ಆರೋಪಿಗಳು ನೀಡಿದ ಮಾಹಿತಿಗಳ ಆಧಾರದಲ್ಲಿ ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತುದ್ದಾರೆ. ಇನ್ನೂ ಪ್ರಕರಣದಲ್ಲಿ ಆರೇಳು ಮಂದಿ ಆರೋಪಿಗಳು ಇರುವುದಾಗಿ ತಿಳಿದು ಬಂದಿದೆ.
ಘಟನೆಯ ವಿವರ;
ಮಾ.9 ರಂದು ಮಧ್ಯ ರಾತ್ರಿ ಎಎಸ್‌ಐ ರಾಮಯ್ಯ ಅವರು ಸಿಬ್ಬಂದಿ ಶಾಂತ ಕುಮಾರ್ ಅವರ ಜೊತೆ ಇಲಾಖಾ ವಾಹನದಲ್ಲಿ ಕರ್ತವ್ಯದಲ್ಲಿದ್ದಾಗ ಕಾಪಿನಡ್ಕ ಎಂಬಲ್ಲಿ ಯುವಕರು ದಾಂಧಲೆ ನಡೆಸುತ್ತಿರುವುದಾಗಿ ಕರೆ ಬಂದಿತ್ತು. ಇಲ್ಲಿ ರಸ್ತೆ ಮೇಲೆ ಕಿಡಿಗೇಡಿಗಳು ಸೋಡಾ ಬಾಟಲಿಯನ್ನು ಪುಡಿ ಮಾಡಿ ಹಾಕಿದ್ದಾರೆ ಎಂದಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಅದನ್ನು ತೆರವುಗೊಳಿಸಿ ಬಳಿಕ ಗುಂಡೇರಿ ಕಡೆಗೆ ತೆರಳುತ್ತಿದ್ದಾಗ ಅಲ್ಲೂ ಕೂಡ ಇದೇ ಮರುಕಳಿಸಿತ್ತು. ಅಲ್ಲಿ ಏಳೆಂಟು ಮಂದಿ ಯುವಕರು ನಿಂತುಕೊಂಡಿದ್ದು ಈ ಕೃತ್ಯ ನಡೆಸುತ್ತಿದ್ದುದನ್ನು ಎಎಸ್ ಐ ರಾಮಯ್ಯ ಅವರು ಪ್ರಶ್ನೆ ಮಾಡಿದ್ದಕ್ಕೆ ಅವರಿಗೆ ನಿಂದಿಸಿ, ಈದಿನ ಶಿವರಾತ್ರಿ ನಾವು ಏನು ಬೇಕಾದರೂ ಮಾಡಬಹುದು ಎಂಬುದಾಗಿ ಗದರಿಸಿ ಮೈಮೇಲೆ ಕೈ ಮಾಡಿ ದೂಡಿ ಹಾಕಿ,ಹಲ್ಲೆ ನಡೆಸಿ ಗಾಯ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಬಗ್ಗೆಯೂ ತುಚ್ಚವಾಗಿ ಮಾತನಾಡಿ ನಿಂದಿಸಿದ್ದಾರೆ. ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಎಎಸ್‌ಐ ರಾಮಯ್ಯ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.