ಈ ಬಾರಿ ಕಾಂಗ್ರೆಸ್ ಪಕ್ಷ ದೇಶದ ಚುಕ್ಕಾಣಿ ಹಿಡಿಯಲಿದೆ, ಮಹಿಳೆ ಪ್ರಧಾನಿ ಆಗ್ತಾರೆ : ಸ್ಫೋಟಕ ಭವಿಷ್ಯ ನುಡಿದ ನೊಣವಿನಕೆರೆ ಡಾ. ಯಶ್ವಂತ ಗುರೂಜಿ
ತುಮಕೂರು, ಮಾರ್ಚ್.10: ದೇಶದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಟಿಕೆಟ್ ಹಂಚಿಕೆಯ ತಲೆ ಬಿಸಿಯ ನಡುವೆಯೇ ಪ್ರಚಾರಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹಲವು ಸಂಸ್ಥೆಗಳು ತಮ್ಮ ಸಮೀಕ್ಷೆಯನ್ನು ಬಿಡುಗಡೆ ಮಾಡಿವೆ, ತಮ್ಮದೆ ಆದ ಚುನಾವಣಾ ಭವಿಷ್ಯ ಹೇಳಿವೆ.
ಇದರ ಜೊತೆಗೆ ಸ್ವಾಮಿಜಿಗಳು ಕೂಡ ಮುಂದಿನ ಚುನಾವಣೆಯಲ್ಲಿ ಯಾರು ಗೆಲವು ದಾಖಲಿಸಲಿದ್ದಾರೆ…? ಯಾರು ಪ್ರಧಾನಿ ಆಗುತ್ತಾರೆ…? ಯಾರಿಗೆ ಲೋಕಸಭಾ ಗದ್ದುಗೆ ಎನ್ನುವ ಬಗ್ಗೆ ತಮ್ಮದೆ ಭವಿಷ್ಯ ನುಡಿಯುತ್ತಾರೆ. ತುಮಕೂರಿನ ನೊಣವಿನಕೆರೆಯ ಯಶ್ವಂತ ಗುರೂಜಿ ಮುಂದಿನ ಪ್ರಧಾನಿ ಒಬ್ಬ ಮಹಿಳೆಯಾಗಲಿದ್ದಾರೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಮುಂದಿನ ಪ್ರಧಾನಿ ಓರ್ವ ಮಹಿಳೆ: ಯಶ್ವಂತ ಗುರೂಜಿ
ತಾವು ಹೇಳಿರುವ ಹಲವು ಭವಿಷ್ಯಗಳು ನಿಜವಾಗಿರುವ ಬೆನ್ನಲ್ಲೇ ತಿಪಟೂರು ತಾಲೂಕಿನ ಖ್ಯಾತ ನೊಣವಿನಕೆರೆಯ ಕಾಲಜ್ಞಾನಿ ಡಾ ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಎರಡು ಬಾರಿ ಪ್ರಧಾನಿ ಆಗಿರುವ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನ ಮಂತ್ರಿ ಹುದ್ದೆಗೆ ಏರಲ್ಲ ಎಂದು ಹೇಳಿದ್ದಾರೆ. ಜೊತೆಗೆ ಈ ದೇಶಕ್ಕೆ ಮಹಿಳಾ ಪ್ರಧಾನಿ ಸಿಗಲಿದ್ದಾರೆ ಎಂದು ಭವಿಷ್ಯ ಹೇಳಿದ್ದಾರೆ.
ಈ ಬಾರಿ ಕಾಂಗ್ರೆಸ್ ಪಕ್ಷ ದೇಶದ ಚುಕ್ಕಾಣಿ ಹಿಡಿಯಲಿದೆ. ಮಹಿಳಾ ಪ್ರಧಾನಿಯಾಗಿ ಪ್ರಿಯಾಂಕ ಗಾಂಧಿ ದೇಶದ ಗದ್ದುಗೆ ಏರಲಿದ್ದಾರೆ. ಒಬ್ಬ ಸ್ತ್ರೀ, ಪುರುಷನ ಎದುರು ದುರ್ಗಿಯಾಗಿ ನಿಂತು ಪುರುಷನಿಗೆ ಭಯ ಹುಟ್ಟಿಸಿ ತಾನೇ ಅಧಿಕಾರವನ್ನ ಮಾಡುವಳು ಎಂದು ನೊಣವಿನಕೆರೆಯಲ್ಲಿ ಯಶ್ವಂತ ಗುರೂಜಿಯಿಂದ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ತಾವು ಗೆದ್ದ ನಂತರ ತಾಯಿ ಮಮತೆಯಿಂದ ತನ್ನ ಅಧಿಕಾರವನ್ನ ಪರರಿಗೆ ಬಿಟ್ಟುಕೊಡುವಳು ಎಂದು ಕಾಲಜ್ಞಾನದಲ್ಲಿ ಉಲ್ಲೇಖವಾಗಿದೆ. ಅಂದರೆ ಪ್ರಿಯಾಂಕಾ ಗಾಂಧಿ ಅವರು ಗೆಲುವು ದಾಖಲಿಸಿದರೂ ಕೂಡ ತಮ್ಮ ಅಧಿಕಾರವನ್ನು ಮತ್ತೊಬ್ಬರಿಗೆ ಬಿಟ್ಟುಕೊಡಲಿದ್ದಾರೆ ಎಂದು ಸ್ವಾಮೀಜಿ ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆಯೂ ಚುನಾವಣೆ ಭವಿಷ್ಯ ನುಡಿದಿದ್ದ ಯಶ್ವಂತ ಸ್ವಾಮೀಜಿ, ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ 135 ಸೀಟು ಪಡೆಯಲಿದೆ ಎಂದು ಹೇಳಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋ ಬಗ್ಗೆ ಭವಿಷ್ಯ ನುಡಿದಿದ್ದರು. ಹೀಗಾಗಿ ಇವರ ಚುನಾವಣಾ ಭವಿಷ್ಯದ ಮೇಲೆ ತುಂಭಾ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದು ರಾಜಕೀಯ ಪಕ್ಷಗಳಲ್ಲಿ ಆತಂಕ ಮತ್ತು ಸಂಭ್ರಮ ಎರಡನ್ನು ಹುಟ್ಟುಹಾಕಿದೆ.
ಶಿವರಾತ್ರಿಗೂ ಮುನ್ನ ಚುನಾವಣೆಯಾಗಿದ್ದರೇ ಮೋದಿ ಪ್ರಧಾನಿ!
ನಿನ್ನೆ ನಡೆದ ಶಿವರಾತ್ರಿಗೂ ಮುನ್ನ ಲೋಕಸಭಾ ಚುನಾವಣೆ ನಡೆದಿದ್ದರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗುವ ಯೋಗವಿತ್ತು. ಆದರೆ ಈಗ ನರೇಂದ್ರ ಮೋದಿ ಅವರಿಗೆ ಆ ಯೋಗ ಇಲ್ಲ, ಅವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಹೀಗಾಗಿ ಅವರು ಅಧಿಕಾರದ ಕಡೆ ಗಮನ ಕೊಡದೆ, ಆರೋಗ್ಯ ಬಗ್ಗೆ ಗಮನ ಕೊಡುವುದು ಒಳ್ಳೆಯದು ಎಂದು ಯಶ್ವಂತ ಸ್ವಾಮೀಜಿ ತಿಳಿಸಿದ್ದಾರೆ.
ಇನ್ನು, ಮೊದಲ ಬಾರಿಗೆ ಚುನಾವಣೆ ಎದುರಿಸಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ದಶಕಗಳಿಂದ ಕಾಂಗ್ರೆಸ್ ಭಧ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಈ ಹಿಂದೆ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಸ್ಪರ್ಧೆ ಮಾಡಿದ್ದರು. ಸೋನಿಯಾ ಗಾಂಧಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೀಗಾಗಿ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಹೆಚ್ಚಾಗಿದೆ.