December 24, 2024

Lok Sabha elections 2024: 12 ರಾಜ್ಯ.. 29 ಕಾರ್ಯಕ್ರಮ..10 ದಿನ; ಏನಿದು ನರೇಂದ್ರ ಮೋದಿ ಪ್ಲ್ಯಾನ್?

0

ನವದೆಹಲಿ, ಮಾರ್ಚ್ 04: ಬಹು ನಿರೀಕ್ಷಿತ ಲೋಕಸಭೆ ಚುನಾವಣೆಗೆ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 4 ರ ಸೋಮವಾರದಿಂದ 29 ಕಾರ್ಯಕ್ರಮಗಳಲ್ಲಿ ಭಾಗವಹಿಸಲು ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 10 ದಿನಗಳ ಭೇಟಿಯನ್ನು ಕೈಗೊಳ್ಳಲಿದ್ದಾರೆ.

ಅಧಿಕಾರಿಗಳು ಹಂಚಿಕೊಂಡ ವೇಳಾಪಟ್ಟಿಯ ಪ್ರಕಾರ, ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ಪ್ರಧಾನಿ ಮೋದಿ ಮುಂದಿನ 10 ದಿನಗಳಲ್ಲಿ ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ಮೋದಿಯವರ 10 ದಿನಗಳ ಪ್ಲ್ಯಾನ್ ಇಲ್ಲಿದೆ
ಮಾರ್ಚ್ 4: ತೆಲಂಗಾಣಕ್ಕೆ ಭೇಟಿ ನೀಡಲಿರುವ ಮೋದಿ ಅಲ್ಲಿ ಅದಿಲಾಬಾದ್‌ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ತಮಿಳುನಾಡಿನ ಕಲ್ಪಾಕ್ಕಂಗೆ ತೆರಳುತ್ತಾರೆ. ಅಲ್ಲಿ ಅವರು ಭಾರತೀಯ ನಾಭಿಕಿಯಾ ವಿದ್ಯುತ್ ನಿಗಮ್ ಲಿಮಿಟೆಡ್ (ಭಾವಿನಿ) ಗೆ ಭೇಟಿ ನೀಡಲಿದ್ದಾರೆ ಮತ್ತು ಚೆನ್ನೈನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅವರು ಹೈದರಾಬಾದ್‌ಗೆ ತೆರಳಲಿದ್ದಾರೆ.

ಮಾರ್ಚ್ 5: 2 ನೇ ದಿನ, ಅವರು ತೆಲಂಗಾಣದ ಸಂಗಾರೆಡ್ಡಿಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹಲವಾರು ಯೋಜನೆಗಳನ್ನು ಉದ್ಘಾಟಿಸುತ್ತಾರೆ. ನಂತರ ಅಲ್ಲಿಂದ ಒಡಿಶಾಗೆ ಪ್ರಯಾಣಿಸುತ್ತಾರೆ. ಇಲ್ಲಿ ಅವರು ಚಂಡಿಖೋಲೆಯಲ್ಲಿ ಸಾರ್ವಜನಿಕ ಭಾಷಣದ ನಂತರ ಜಾಜ್‌ಪುರದ ಚಂಡಿಖೋಲೆಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಬಳಿಕ ಅವರು ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ.

ಮಾರ್ಚ್ 6: ಬುಧವಾರ, ಮೋದಿ ಅವರು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಪಶ್ಚಿಮ ಬಂಗಾಳಕ್ಕೆ ಲಗ್ಗೆ ಇಡಲಿದ್ದಾರೆ. ಅಲ್ಲಿ ಕೋಲ್ಕತ್ತಾ ಮೆಟ್ರೋದ ಹೌರಾ ಮೈದಾನ- ಎಸ್‌ಪ್ಲನೇಡ್ ಮೆಟ್ರೋ ವಿಭಾಗ ಸೇರಿದಂತೆ ಕೋಲ್ಕತ್ತಾದಲ್ಲಿ 15,400 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಅಡಿಪಾಯ ಹಾಕಲಿದ್ದಾರೆ. ನಂತರ, ಬೆಟ್ಟಿಯಾದಲ್ಲಿ 12,800 ಕೋಟಿ ರೂ. ಮೌಲ್ಯದ ಹಲವಾರು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಿಹಾರಕ್ಕೆ ತೆರಳುತ್ತಾರೆ.

ಮಾರ್ಚ್ 7: ತಮ್ಮ ಭೇಟಿಯ 4 ನೇ ದಿನದಂದು, ಪ್ರಧಾನಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 2019 ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದು ಕಾಶ್ಮೀರ ಕಣಿವೆಗೆ ಪಿಎಂ ಮೋದಿ ಅವರ ಮೊದಲ ಭೇಟಿಯಾಗಿದೆ. ನಂತರ ಅವರು ನವದೆಹಲಿಯಲ್ಲಿ ಮಾಧ್ಯಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್ 8: ದಿನ 5 ರಂದು, ಅವರು ದೆಹಲಿಯಲ್ಲಿ ಮೊಟ್ಟಮೊದಲ ರಾಷ್ಟ್ರೀಯ ಸೃಷ್ಟಿಕರ್ತರ ಪ್ರಶಸ್ತಿಯಲ್ಲಿ ಭಾಗವಹಿಸುತ್ತಾರೆ. ಈ ಬಗ್ಗೆ ತಮ್ಮ ಇತ್ತೀಚಿನ ಸಂಚಿಕೆ ಮನ್ ಕಿ ಬಾತ್, ಜನರಿಗೆ ಅವರ ಮಾಸಿಕ ರೇಡಿಯೋ ಭಾಷಣದಲ್ಲಿ ಘೋಷಿಸಿದರು. ಬಳಿಕ ಸಂಜೆ ಅಸ್ಸಾಂಗೆ ತೆರಳಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್ 9: ಶನಿವಾರದಂದು, ಪ್ರಧಾನಿ ಮೋದಿ ಅವರು ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಪಶ್ಚಿಮ ಕಮೆಂಗ್‌ನಲ್ಲಿ ಸೆಲಾ ಸುರಂಗವನ್ನು ಉದ್ಘಾಟಿಸಲಿದ್ದಾರೆ. ನಂತರ, ಅವರು ಅಸ್ಸಾಂಗೆ ತೆರಳುತ್ತಾರೆ, ಅಲ್ಲಿ ಅವರು ಜೋರ್ಹತ್‌ನಲ್ಲಿ ಲಚಿತ್ ಬರ್ಫುಕನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತಾರೆ ಮತ್ತು ನಂತರ ಅಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕುತ್ತಾರೆ. ನಂತರದ ದಿನದಲ್ಲಿ, ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಸಿಲಿಗುರಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ, ನಂತರ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.

ಮಾರ್ಚ್ 10: ಸಮಾಜವಾದಿ ಪಕ್ಷದ ಭದ್ರಕೋಟೆಯಾದ ಅಜಂಗಢದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಭಾನುವಾರ ಉತ್ತರ ಪ್ರದೇಶಕ್ಕೆ ತೆರಳಲಿದ್ದಾರೆ. ಪ್ರಧಾನಿ ಭೇಟಿಗೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ನಗರಕ್ಕೆ ಭೇಟಿ ನೀಡಿ ಮಂಡೂರಿ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕ ಸಭೆಯ ಸಂಭವನೀಯ ಸ್ಥಳದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಮಾರ್ಚ್ 11: 8 ನೇ ದಿನದಂದು, ಪ್ರಧಾನಿ ಮೋದಿ ‘ನಮೋ ಡ್ರೋನ್ ದೀದಿ’ ಮತ್ತು ‘ಲಖಪತಿ ದೀದಿ’ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರ ರಾಜಧಾನಿಯಲ್ಲಿರುತ್ತಾರೆ. ನಂತರ, ಅವರು ದ್ವಾರಕಾ ಎಕ್ಸ್‌ಪ್ರೆಸ್‌ವೇಯ ಹರಿಯಾಣ ವಿಭಾಗವನ್ನು ಉದ್ಘಾಟಿಸಲಿದ್ದಾರೆ ಮತ್ತು ಸಂಜೆ, ಪ್ರಧಾನ ಮಂತ್ರಿ ಡಿಆರ್‌ಡಿಒ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್ 12: 9 ನೇ ದಿನದಂದು, ಪ್ರಧಾನಿ ಮೋದಿ ಅವರು ಗುಜರಾತ್‌ನ ಸಬರಮತಿಗೆ ಭೇಟಿ ನೀಡಲಿದ್ದಾ. ನಂತರ ರಾಜಸ್ಥಾನಕ್ಕೆ ತೆರಳುತ್ತಾರೆ, ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್ ಪ್ರವಾಸ ಮಾಡುತ್ತಾರೆ.

ಮಾರ್ಚ್ 13: ತಮ್ಮ ಭೇಟಿಯ ಕೊನೆಯ ದಿನದಲ್ಲಿ, ಪ್ರಧಾನಿ ಮೋದಿ ಅವರು ಗುಜರಾತ್ ಮತ್ತು ಅಸ್ಸಾಂನಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೂರು ಸೆಮಿಕಂಡಕ್ಟರ್ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ, ನಂತರ ಸಮಾಜದ ಹಿಂದುಳಿದ ವರ್ಗಗಳ ಜೊತೆಗೆ ಸಂಪರ್ಕ ಕಾರ್ಯಕ್ರಮವನ್ನು ನಡೆಸಲಿದ್ದಾರೆ.

ಇನ್ನು ಬಿಜೆಪಿಯು ತನ್ನ ಬಹು ನಿರೀಕ್ಷಿತ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ ವಾರಣಾಸಿಯಿಂದ ಪಿಎಂ ಮೋದಿ ಮತ್ತು ಗುಜರಾತ್‌ನ ಗಾಂಧಿನಗರದಿಂದ ಅಮಿತ್ ಶಾ ಅವರಂತಹ ದಿಗ್ಗಜರನ್ನು ಕಣಕ್ಕಿಳಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು