ಪರಿಹಾರದ ಹಣ ಬಿಡುಗಡೆ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಸರಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ
ಕೋಲಾರ, ಜನವರಿ 30: ರಾಜ್ಯದಲ್ಲಿ ಬರಗಾಲ ವ್ಯಾಪ್ತಿಸಿ ಆರೇಳು ತಿಂಗಳು ಕಳೆದರೂ ಸಹ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಿಲ್ಲ, ಈವರೆಗೆ 800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಪಕ್ಷವು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ದ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಂಡಿತ್ತು. ಈ ವೇಳೆ ಮಾತನಾಡಿದ ಆರ್.ಅಶೋಕ್, ಅಲ್ಪಸಂಖ್ಯಾತರ ಅಭಿವೃದ್ದಿಗೆ 1000 ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದಲ್ಲಿ ಕೋಲಾರ ಜಿಲ್ಲೆಗೆ 54 ಕೋಟಿ ರೂ ಬಿಡುಗಡೆ ಮಾಡಿತ್ತು. 2022ರ ಡಿಸೆಂಬರ್‌ನಲ್ಲಿ ಬರ ಘೋಷಣೆಯಾದಾಗ ಬಿಜೆಪಿ ಸರ್ಕಾರವು 3 ಸಾವಿರ ಕೋಟಿ ರೂ ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬ ರೈತರಿಗೆ 20 ರಿಂದ 30 ಸಾವಿರ ರೂ ಸೇರಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಕೋಲಾರ ಜಿಲ್ಲೆಗೆ ಕೇವಲ 3 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಲು ನಾಚಿಕೆಯಾಗಬೇಕು ಎಂದರು.