ರಾಜ್ಯದ 25 ಬಿಜೆಪಿ ಲೋಕಸಭಾ ಸದಸ್ಯರು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ: ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, ಜನವರಿ 29: ಬರಪರಿಹಾರದಲ್ಲಿ ಅನ್ಯಾಯ, ತೆರಿಗೆ ಪಾಲಿನಲ್ಲಿ ವಂಚನೆ, ಹಣಕಾಸು ಆಯೋಗದ ಅನುದಾನದಲ್ಲಿ ಮೋಸ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣ ನೀಡದೆ ಅನ್ಯಾಯ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಒಂದೇ ಎರಡೇ? ಹೀಗಿದ್ದರೂ ರಾಜ್ಯದ 25 ಬಿಜೆಪಿ ಲೋಕಸಭಾ ಸದಸ್ಯರು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಬರಪೀಡಿತ ಪ್ರದೇಶದ ರೈತರಿಗೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಪರಿಹಾರದ ಹಣ ನೀಡದೆ ಕಳೆದ ಐದು ತಿಂಗಳಿನಿಂದ ಗೋಳಾಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲಾಗದ ರಾಜ್ಯದ ಪುಕ್ಕಲು ಬಿಜೆಪಿ ನಾಯಕರು ನಮ್ಮ ವಿರುದ್ಧ ”ಪರಿಹಾರ ಕೊಡಿ ಕುರ್ಚಿ ಬಿಡಿ” ಎಂಬ ನಾಟಕ ಪ್ರದರ್ಶನಕ್ಕೆ ಹೊರಟಿರುವುದು ಹಾಸ್ಯಾಸ್ಪದ ಮಾತ್ರವಲ್ಲ ನಾಡಿನ ರೈತರಿಗೆ ಬಗೆಯುತ್ತಿರುವ ದ್ರೋಹವಾಗಿದೆ ಎಂದಿದ್ದಾರೆ.