ಜ. 26ರಂದು ಪ್ರವೇಶ ಪರೀಕ್ಷೆ: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ PUC ಶಿಕ್ಷಣ
ವೇಣೂರು : ಬೆಳ್ತಂಗಡಿ ತಾಲೂಕಿನ ವೇಣೂರು ನಿಟ್ಟಡೆಯ ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌ ಶಿಕ್ಷಣವನ್ನು ಹಲವಾರು ಬಡ, ನಿರ್ಗತಿಕ ವಿದ್ಯಾರ್ಥಿಗಳಿಗೆ ರಿಯಾಯಿತಿ ಹಾಗೂ ಉಚಿತ ಶಿಕ್ಷಣ ನೀಡುತ್ತಾ ಬಂದಿರುತ್ತೇವೆ. ಮುಂಬರುವ ಸಾಲಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪರೀಕ್ಷೆಯ ಮೂಲಕ ಉಚಿತ ಶಿಕ್ಷಣ ನೀಡಲಿದ್ದೇವೆ. ಅದಕ್ಕಾಗಿ 26-01-2024 ಶುಕ್ರವಾರದಂದು ಕುಂಭಶ್ರೀ ಸಂಸ್ಥೆಯಲ್ಲಿ ಪ್ರವೇಶಾತಿ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಂಭಶ್ರೀ ವಿದ್ಯಾಸಂಸ್ಥೆಯ ಸಂಚಾಲಕರಾದ ಗಿರೀಶ್ KH ಹೇಳಿದರು.
ಅವರು ಇಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವೇಣೂರು ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆಗೆ ಇದೀಗ 26ರ ಸಂವತ್ಸರ. ಶಿಕ್ಷಣ ಕ್ಷೇತ್ರದಲ್ಲಿ ಎದುರಾದ ಸಾವಿರಾರು ಅಡೆತಡೆಗಳನ್ನು ಎದುರಿಸಿ ಆತ್ಮವಿಶ್ವಾಸದಿಂದ ಮುನ್ನಡೆದು ಪ್ರಗತಿಪಥದಲ್ಲಿ ಮುಂದುವರಿಯುತ್ತಿರುವ ನಾಡಿನ ಹೆಮ್ಮೆಯ ಕುಂಭಶ್ರೀ ವಿದ್ಯಾಸಂಸ್ಥೆಯ ಪ್ರರಿಶ್ರಮದ ಫಲವಾಗಿ ಹಲವಾರು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಭಿನ್ನವಾದ ಪ್ರಶಸ್ತಿಯ ಗರಿಗಳು ಸಂದಿವೆ. ಜತೆಗೆ ಮಕ್ಕಳ ಕ್ರೀಡೆ, ಬೌದ್ಧಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ವೇಣೂರು ಪರಿಸರದಲ್ಲಿ ಚಿಕ್ಕದಾಗಿ ಆರಂಭಗೊಂಡ ನಮ್ಮ ಕುಂಭಶ್ರೀ ವಿದ್ಯಾಸಂಸ್ಥೆ ಇಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ನೀಡುತ್ತಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿತ್ ಕುಲಾಲ್ ಅವರು ಮಾತನಾಡಿ, ಗುರುಕುಲ ಪದ್ದತಿಯನ್ನು ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಿರುವ ಶಾಲೆಯ ಸಾಧನೆಯನ್ನು ಗುರುತಿಸಿ ಹಲವು ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿದೆ. ಜ್ಞಾನ ಗಂಗೋತ್ರಿ ರಾಜ್ಯಪ್ರಶಸ್ತಿ-೨೦೦೮, ರಾಷ್ಟ್ರಮಟ್ಟದ ಸ್ಟಾರ್ ಆಫ್ ಏಷ್ಯಾ ಪ್ರಶಸ್ತಿ-೨೦೧೯, ರಾಷ್ಟ್ರೀಯ ವಿದ್ಯಾಗೌರವ ಪ್ರಶಸ್ತಿ-೨೦೧೯, ಪ್ರಬುದ್ಧಭಾರತ ಪ್ರಶಸ್ತಿ-೨೦೨೧, ವಿದ್ಯಾರತ್ನ ಪ್ರಶಸ್ತಿ-೨೦೨೨, ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮತ್ತಿತರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲರಾದ ಓಮನಾ ಅ ಅವರು ಮಾತನಾಡಿ, ಜನವರಿ 6ರಂದು ಸಂಸ್ಥೆಯಲಿರುವ ಮಾತಾ-ಪಿತಾ ಗುರು ದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜ ಅವರು ಒದಗಿಸಿದ ಅನುದಾನದಲ್ಲಿ ಇಂಟರ್‌ಲಾಕ್ ಕಾಮಗಾರಿ ಹಾಗೂ ಶಾಲೆಯ ಹಿತೈಷಿ ದಾನಿ ದಿನೇಶ ದಾಮೋದರ ಗೋಖಲೆ ಚಿಕ್ಕಮಗಳೂರು ಅವರು ಕೊಡುಗೆಯಾಗಿ ನೀಡಿದ ಶಾಲಾ ಕೊಠಡಿಯ ಉದ್ಘಾಟನೆ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಅಕ್ಷತಾ, ಮುಖ್ಯ ಶಿಕ್ಷಕಿ ಪ್ರಾಥಮಿಕ ಶಾಲೆ, ಪೂಜಿತ್ ಕುಲಾಲ್ ಹಳೆ ವಿದ್ಯಾರ್ಥಿ ಉಪಸ್ಥಿತರಿದ್ದರು.