ಬೆಂಗಳೂರು, ಡಿಸೆಂಬರ್ 31; ಬ್ಯಾಂಕುಗಳ ಖಾತೆಯಂತೆ ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಬೇಕಿದೆ. ಇದಕ್ಕೆ ಅಂತಿಮ ದಿನಾಂಕ ನಿಗದಿ ಮಾಡಲಾಗಿದೆ, ಇಲ್ಲವಾದಲ್ಲಿ ಸಬ್ಸಿಡಿ ದೊರೆಯುವುದಿಲ್ಲ ಎಂಬ ಸುದ್ದಿಗಳು ಜನರಲ್ಲಿ ಗೊಂದಲ ಉಂಟು ಮಾಡಿವೆ.
ಅಡುಗೆ ಅನಿಲ ಸಂಪರ್ಕ ಹೊಂದಿರುವ ಫಲಾನುಭವಿಗಳು ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಎಂಬ ವದಂತಿಗೆ ಕಿವಿಗೊಡದಿರಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಕರೆ ನೀಡಿದೆ. ಈ ಮೂಲಕ ಗೊಂದಲವನ್ನು ದೂರ ಮಾಡಿದೆ.
ಇಲಾಖೆಯ ಸ್ಪಷ್ಟನೆಗಳು; ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಬಯೋಮೆಟ್ರಿಕ್ ನೀಡಲು ಕೇಂದ್ರ ಸರ್ಕಾರವು ಯಾವುದೇ ರೀತಿಯ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಬಯೋಮೆಟ್ರಿಕ್ ನೀಡಬಹುದಾಗಿದೆ.
ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಅನಾವಶ್ಯಕ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ ಸಂಖ್ಯೆ ದಾಖಲಾತಿಯೊಂದಿಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಅಲ್ಲದೇ ಇ-ಕೆವೈಸಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲ. ಅಡುಗೆ ಅನಿಲ ಗ್ಯಾಸ್ ಬಳಕೆದಾರರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಮನವಿ ಮಾಡಲಾಗಿದೆ.
ಒಬ್ಬ ಗ್ರಾಹಕ ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಹೊಂದಿದ್ದರೆ ಅದನ್ನು ಪತ್ತೆ ಹಚ್ಚುವ ಸಲುವಾಗಿ ಗ್ಯಾಸ್ ಏಜೆನ್ಸಿಗಳು ಇ-ಕೆವೈಸಿ ಮಾಡಿಸಬೇಕು ಎಂದು ಹೇಳಿವೆ. ಗೃಹ ಬಳಕೆ ಸಿಲಿಂಡರ್‌ಗಳ ದುರ್ಬಳಕೆ ತಡೆಯಲು ತೈಲ ಕಂಪನಿಗಳು ಏಜೆನ್ಸಿಗಳಿಗೆ ಗ್ರಾಹಕರ ಇ-ಕೆವೈಸಿ ಮಾಡಿಸಲು ಆದೇಶಿಸಿವೆ. ಆದರೆ ಇದಕ್ಕೆ ಅಂತಿಮ ದಿನಾಂಕ ನಿಗದಿಗೊಳಿಸಿಲ್ಲ. ಅಂತಿಮ ದಿನಾಂಕ ನಿಗದಿ ಮಾಡಲಾಗಿದೆ ಎಂಬ ವದಂತಿ ಹಿನ್ನಲೆಯಲ್ಲಿ ಜನರು ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಅಲ್ಲದೇ ಇ-ಕೆವೈಸಿ ಮಾಡಿಸದಿದ್ದರೆ ಸಿಲಿಂಡರ್ ಸಬ್ಸಿಡಿ ಸಹ ಕಡಿತವಾಗಲಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದ ಮೂಲಕ ಹರಿದಾಡುತ್ತಿವೆ. ಆದ್ದರಿಂದ ಇಲಾಖೆ ಮೂಲಕ ಸ್ಪಷ್ಟನೆಗಳನ್ನು ನೀಡಲಾಗುತ್ತಿದೆ.