ಸುಲ್ಕೇರಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣ ಮಹೋತ್ಸವ ದಾನದಿಂದ ಸಂಪತ್ತು ವೃದ್ಧಿ: ಡಾ.ಡಿ. ವೀರೇಂದ್ರ ಹೆಗ್ಗಡೆ
ಸುಲ್ಕೇರಿ : ಸಂಪಾದನೆಯ ಭಾಗವನ್ನು ಪರೋಪಕಾರ, ದಾನಕ್ಕೆ ವಿನಿಯೋಗಿಸಬೇಕು. ದಾನದ ಮೂಲಕ ಆಗುವ ಖರ್ಚು, ಜೀವನದ ಪುಣ್ಯ ಸಂಪಾದನೆಯಲ್ಲಿ ಜಮೆಯಾಗುತ್ತದೆ. ದಾನ ಮಾಡುವವರ ಸಂಪತ್ತು ಇನ್ನಷ್ಟು ಹೆಚ್ಚುವುದಲ್ಲದೆ, ಜೀವನದ ಸುಖ, ಶಾಂತಿಗಳಿಗೂ ಕಾರಣವಾಗುತ್ತದೆ. ಮುನಿಗಳು ತ್ಯಾಗದ ಪ್ರತೀಕವಾಗಿದ್ದು, ಅದರ ಮಹತ್ವವನ್ನು ಸಾರುವ ಸಂದೇಶಗಳನ್ನು ಸಮಾಜಕ್ಕೆ ನೀಡುತ್ತಾರೆ. ಇವುಗಳನ್ನು ಅನುಸರಿಸಿ ನಡೆದರೆ ಜೀವನ ಪಾವನವಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ಸುಲ್ಕೇರಿಯ ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿಯ ಪುನಃ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸುಲ್ಕೇರಿ ಬಸದಿಯ ಕೆಲಸ ಎಲ್ಲ ಶ್ರಾವಕ ಬಂಧುಗಳ ತ್ಯಾಗದ ಫಲದಿಂದ ಬಹುವೇಗವಾಗಿ ನಿರ್ಮಾಣಗೊಂಡಿದೆ. ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಮೂಲಕ 500ಕ್ಕೂ ಅಧಿಕ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ ಳ.ಇಂದಿನ ದಿನಗಳಲ್ಲಿ ಶಿಲಾಮಯ ದೇಗುಲಗಳು ನಿರ್ಮಾಣಗೊಳ್ಳುತ್ತಿರುವುದು ಉತ್ತಮ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೇಗುಲಗಳು ಜೀರ್ಣೋದ್ಧಾರಗೊಳ್ಳಲಿವೆ”ಎಂದರು.
ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿ “ಸಂಕಲ್ಪ ಶಕ್ತಿ,ಒಮ್ಮತದಿಂದ ಯಾವುದೇ ಕಾರ್ಯಸಾಧ್ಯ ಎಂಬುದಕ್ಕೆ ಅತಿಕಡಿಮೆ ಅವಧಿಯಲ್ಲಿ ಸುಲ್ಕೇರಿಯಲ್ಲಿ ನಡೆದಿರುವ ಕೆಲಸ ಉತ್ತಮ ಉದಾಹರಣೆ. ಜೀವನದಲ್ಲಿ ಸತ್ಯ,ನ್ಯಾಯ,ಧರ್ಮದ ಜತೆ ಅಹಿಂಸೆಯ ತತ್ವ ಸಾರಿದವರು ತೀರ್ಥಂಕರರು.ಶ್ರದ್ಧೆ,ಭಕ್ತಿಯಿಂದ ಸಿಗುವ ಅಸೀಮ ಶಕ್ತಿಯಿಂದ,ಉತ್ತಮ ಕೆಲಸದಿಂದ ಮಾನವ ಮಾಧವನಾಗಲು ಸಾಧ್ಯ”ಎಂದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ,ಶ್ರೀ ಕ್ಷೇತ್ರ ಪಡ್ದ್ಯಾರಬೆಟ್ಟುವಿನ ಅನುವಂಶೀಯ ಆಡಳಿತದಾರರಾದ ಎ.ಜೀವಂಧರ್ ಕುಮಾರ್,ಮೂಡಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್,ಅಳದಂಗಡಿಯ ಪದ್ಮಾಂಬ ನಾಗಕುಮಾರ್ ಜೈನ್,ಸುಲ್ಕೇರಿ ಶ್ರೀ ನೇಮಿನಾಥ ಬಸದಿಯ ಆಡಳಿತ ಮೊಕ್ತೇಸರ ರವಿರಾಜ್ ಹೆಗ್ಡೆ,ತುಮಕೂರಿನ ಉದ್ಯಮಿ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.
ಸುಲ್ಕೇರಿ ಬಸದಿ,ಗ್ರಾಮಾಭಿವೃದ್ದಿ ಯೋಜನೆಯ ಪರವಾಗಿ ಡಾ.ಹೆಗ್ಗಡೆಯವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಾಸ್ತು ತಜ್ಞ ಡಾ.ಪಾದೂರು ಸುದರ್ಶನ ಕುಮಾರ ಇಂದ್ರ ಹಾಗೂ ನಿರ್ಮಲ್ ಕುಮಾರ್ ಜೈನ್ ಮೂಡಬಿದ್ರೆ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ್ ಕುಮಾರ್ ಜೈನ್ ವಂದಿಸಿದರು. ಪೂಜಾಷ್ಟಕವನ್ನು ಜಿನಗಾನ ವಿಶಾರದೆ ಜಯಶ್ರೀ ಧರಣೇಂದ್ರ ಜೈನ್ ಹೊರನಾಡು ಮತ್ತು ತಂಡದವರು ನಡೆಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ,ಝಿ ಕನ್ನಡ,ಕಲರ್ಸ್ ಕನ್ನಡ ರಿಯಾಲಿಟಿ ಶೋಗಳನ್ನು ನೀಡಿರುವ ಜ್ಞಾನ ಐತಾಳ್ ನೇತೃತ್ವದ ‘ಹೆಜ್ಜೆನಾದ’, ಮಂಗಳೂರು ತಂಡದವರಿಂದ ನೃತ್ಯ-ಸಂಗೀತ ವೈಭವ ನಡೆಯಿತು.