ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು: ಪ್ರಾಯೋಗಿಕ ಸಂಚಾರ ಯಶಸ್ವಿ ಡಿ. 30ರಂದು ಪ್ರಧಾನಿ ಮೋದಿಯವರಿಂದ ಅಧಿಕೃತ ಚಾಲನೆ
ಮಂಗಳೂರು: ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸಿಕ್ಕಿದೆ. ಕರಾವಳಿ ನಗರಿ ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸಲಿದ್ದು, ಪ್ರಾಯೋಗಿಕ ಸಂಚಾರವೂ ಸಹ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ರೈಲ್ವೆ ಇಲಾಖೆ ಅಧಿಕಾರಿಗಳು ಮಂಗಳೂರು-ಮಡಗಾಂವ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಾಕ್ಷಿಯಾದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಹೊರತುಪಡಿಸಿ ಉಳಿದ ದಿನ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಡಲಿದೆ. ಮಧ್ಯಾಹ್ನ 1.05ಕ್ಕೆ ಮಡಗಾಂವ್ ತಲುಪಲಿದೆ.
ಮಡಗಾಂವ್-ಮಂಗಳೂರು ಸೆಂಟ್ರಲ್ ನಡುವಿನ ರೈಲು ಮಡಗಾಂವ್‌ನಿಂದ ಸಂಜೆ 6.10ಕ್ಕೆ ಹೊರಟು, ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲಿಗೆ ಉಡುಪಿ ಮತ್ತು ಕಾರವಾರದಲ್ಲಿ ಮಾತ್ರ ನಿಲುಗಡೆ ಇದೆ.
ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30ರಂದು ಚಾಲನೆ ನೀಡಲಿದ್ದಾರೆ. ಈ ಮೂಲಕ ಮಂಗಳೂರಿಗೆ ವಂದೇ ಭಾರತ್ ರೈಲು ಬೇಕು ಎನ್ನುವ ಬೇಡಿಕೆ ಈಡೇರಲಿದೆ.