ಅರ್ವ ಕೊರಗಪ್ಪ ಶೆಟ್ಟಿಗೆ 2022-23ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಂದ ಪ್ರಕಟ
ಅಳದಂಗಡಿ (ಅರ್ವ): ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರೂ ರಾಜ್ಯ ಪ್ರಶಸ್ತಿ ವಿಜೇತರೂ ಆದ ಅರುವ ಕೊರಗಪ್ಪ ಶೆಟ್ಟಿ (83) ಅವರಿಗೆ ಸರಾಕಾರವು 2022-23ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿ ಘೋಷಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಬುಧವಾರ ಪ್ರಕಟಿಸಿದ್ದಾರೆ.
ಅಳದಂಗಡಿಯ ಸುಬ್ಬಯ್ಯ ಶೆಟ್ಟಿ ಮತ್ತು ಕಾಂತಕ್ಕೆ ದಂಪತಿಗಳ ಹಿರಿಯ ಮಗನಾಗಿ 28 ನವೆಂಬರ್ 1940ರಲ್ಲಿ ಜನಿಸಿದ ಅವರು ತಮ್ಮ 15ನೇ ವರ್ಷದಲ್ಲಿ ಕಟೀಲು ಮೇಳವನ್ನು ಸೇರಿಕೊಂಡು ಕಳೆದ 7 ದಶಕಗಳಿಂದ ವಿವಿಧ ಮೇಳಗಳಲ್ಲಿ ಕಲಾಸೇವೆ ನೀಡುತ್ತಿದ್ದಾರೆ.
ಗದಾಯುದ್ಧ’ದ ಕೌರವ, ಕೋಟಿ ಚೆನ್ನಯ’ದ ಕೋಟಿ ಮುಂತಾದ ಪಾತ್ರಗಳ ನಿರ್ವಹಣೆಯಲ್ಲೂ ಅವರು ಪ್ರಸಿದ್ಧಿ ಪಡೆದಿದ್ದಾರೆ. 3 ವರ್ಷ ಕಾಲ ಕಟೀಲು ಮೇಳ, ಕೂಡ್ಲು ಮೇಳದಲ್ಲಿ 2 ವರ್ಷ, ಕುಂಡಾವು ಮೇಳದಲ್ಲಿ 7 ವರ್ಷ, ಕುಂಡಾವು, ಕದ್ರಿ, ಮಂಗಳಾ ದೇವಿ, ಎಡನೀರು ಮೇಳಗಳಲ್ಲಿ ಸೇವೆ ಸಲ್ಲಿಸಿ, 3ದಶಕಳ ಕಾಲ ಕರ್ನಾಟಕ ಮೇಳದಲ್ಲಿ ಸ್ಟಾರ್ ಕಲಾವಿದರಾಗಿ ರಂಗಸ್ಥಳವನ್ನಾಳಿ, ಪ್ರಸ್ತುತ ಬಪ್ಪನಾಡು ಮೇಳದಲ್ಲಿ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳಾದೇವಿ ಮೇಳದಲ್ಲಿ 12 ವರ್ಷ ಹಾಗೂ ಕರ್ನಾಟಕ ಯಕ್ಷಗಾನ ನಾಟಕ ಸ‘ದಲ್ಲಿ ಕನ್ನಡ ಯಕ್ಷಗಾನ ಪ್ರಸಂಗಗಳಲ್ಲಷ್ಟೇ ಅಲ್ಲದೇ ಹಲವಾರು ತುಳು ಪ್ರಸಂಗಗಳಲ್ಲೂ ಮುಖ್ಯ ಪಾತ್ರಗಳನ್ನು ನಿರ್ವಹಿಸಿ ಜನಮನ ಗೆದ್ದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಎಡನೀರು ಪ್ರಶಸ್ತಿ, ಶ್ರೀ ಪೇಜಾವರ ಮಠದ ರಾಮವಿಠಲ ಪ್ರಶಸ್ತಿ, ಮಾಣಿಲ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಡಾ| ಬಿ.ಬಿ. ಶೆಟ್ಟಿ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ ಆಯ್ದು ಬಂದಿವೆ. ಶ್ರೀ ಅರುವ ಕೊರಗಪ್ಪಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಕಲಾವಿದರಿಗೆ ನೆರವು, ಹೆಣ್ಣು ಮಕ್ಕಳ ಮದುವೆಗೆ ನೆರವು, ವಿದ್ಯಾರ್ಥಿ ವೇತನ ವಿತರಿಸುತ್ತಾ ಬಂದಿದ್ದಾರೆ.
ಸನ್ಮಾನ ಪ್ರಶಸ್ತಿಗಳು: ಒಟ್ಟು 400ಕ್ಕಿಂತಲೂ ಅಧಿಕ ಸನ್ಮಾನಗಳನ್ನು ಪಡೆದ ಹೆಗ್ಗಳಿಕೆ ಇವರಿಗಿದೆ. ಕರ್ನಾಟಕ ರಾಜ್ಯ ಪ್ರಶಸ್ತಿ, ಪೇಜಾವರ ಪ್ರಶಸ್ತಿ, ಎಡನೀರು ಪ್ರಶಸ್ತಿ, ಒಡಿಯೂರು ಪ್ರಶಸ್ತಿ, ಮಣಿಲ ಪ್ರಶಸ್ತಿ, ರೋಟರಿ ಪ್ರಶಸ್ತಿ, ಲಯನ್ಸ್ ಪ್ರಶಸ್ತಿ ಮೊದಲಾದುವುಗಳು.
ಬಿರುದು ಬಾವಲಿಗಳು: ರಂಗಸ್ಥಳದ ರಾಜ, ಅಭಿನಯ ಭಾರ್ಗವ, ರಂಗಶಿಲ್ಪಿ ಮೊದಲಾದುವುಗಳು.
ನೆನಪಿಡುವ ಘಟನೆ ನಡೆದದ್ದು: ದೇರಳಕಟ್ಟೆಯಲ್ಲಿ ‘ದ್ರೌಪದೀ ವಸ್ತ್ರಾಪಹಾರ’ ಆಟದ ಸಂದರ್ಭದಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುವ ಸಂದರ್ಭದಲ್ಲಿ ಮುದುಕಿಯೊಬ್ಬಳು ಚೂರಿಯನ್ನು ತೆಗೆದು ರಂಗಸ್ಥಳದತ್ತ ಎಸೆದಳು. ಇದು ಅರುವ ಕೊರಗಪ್ಪ ಶೆಟ್ಟಿಯವರ ಪಾತ್ರಚಿತ್ರಣದ ನೈಜತೆಯನ್ನು ಪ್ರತಿಬಿಂಬಿಸಿದ ಘಟನೆ.
ವಿಶಿಷ್ಟ ಕಾರ್ಯಕ್ರಮ: ಅರುವ ಕೊರಗಪ್ಪ ಶೆಟ್ಟಿಯವರ ದುಶ್ಶಾಸನ ಪಾತ್ರ ಅವರ ಮಾಸ್ಟರ್ ಪೀಸ್. ಅವರು ದುಶ್ಶಾಸನ ಪಾತ್ರ ಮಾಡುತ್ತಾ 50 ವರ್ಷಗಳನ್ನು ಪೂರೈಸಿದಾಗ ದುಶ್ಶಾಸನ – 50 ಎಂಬ ಕಾರ್ಯಕ್ರಮ ನಡೆಯಿತಂತೆ.