ವೇಣೂರು ಮಹಾ ಮಸ್ತಕಾಭಿಷೇಕದ ಶ್ರೀಮುಖ ಪತ್ರಿಕೆ ಬಿಡುಗಡೆ ಸೌಹಾರ್ದತೆಯಿಂದ ಲೋಕ ಕಲ್ಯಾಣ: ಮೂಡಬಿದ್ರೆ ಶ್ರೀ
ವೇಣೂರು : ಮನುಷ್ಯರ ವರ್ಣನೆ ವಿಕಟತೆ ಹೊಂದಿದರೆ, ದೇವರ ವರ್ಣನೆಯಲ್ಲಿ ಶ್ರೇಷ್ಠತೆ ಸಿಗುತ್ತದೆ.ಸಾಮಾನ್ಯರು ಭಗವಂತನನ್ನು ಕಾಣಲು ಮಸ್ತಕಾಭಿಷೇಕ ಉತ್ತಮ ಸಂದರ್ಭ.ಜಗದ ಜೀವಿಗಳಿಗೆ ಆಶ್ರಯದಾತರಾಗುವ ಮೂಲಕ ಆದರ್ಶ ಪುರುಷರಾಗೋಣ. ಸೌಹಾರ್ದತೆ ಮೂಲಕ ಎಲ್ಲರನ್ನೂ ತಲುಪಿ ಲೋಕ ಕಲ್ಯಾಣವಾಗಲಿ ಎಂದು ಮೂಡಬಿದಿರೆ ಜೈನ ಮಠದ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.
ಅವರು ಬುಧವಾರ ವೇಣೂರಿನಲ್ಲಿ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಶ್ರೀಮುಖ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು.
ಮಸ್ತಕಾಭಿಷೇಕ ಸಂದರ್ಭ ಪ್ಲಾಸ್ಟಿಕ್ ಬಳಕೆ ಮಾಡದೇ ಪರಿಸರ ಸ್ವಚ್ಚತೆಗೆ ಆದ್ಯತೆ ನೀಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಮಾತನಾಡಿ “ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಕೆಲಸಗಳು ತ್ವರಿತವಾಗಿ ಸಾಗುತ್ತಿವೆ. ಅಟ್ಟಳಿಗೆ ನಿರ್ಮಾಣ ನಡೆಯುತ್ತಿದೆ. ಬೆಟ್ಟದ ಬದಿಯ ಸಿಮೆಂಟ್ ಪ್ಲಾಸ್ಟರಿಂಗ್ , ಬೆಟ್ಟದ ಬದಿಯ ಎರಡು ಬಸದಿಗಳ ಜೀರ್ಣೋದ್ಧಾರ,ಅಲ್ಪ ಸಂಖ್ಯಾತರ ಇಲಾಖೆ ವತಿಯಿಂದ ದೊರೆತ 1ಕೋಟಿ ರೂ. ಅನುದಾನದಲ್ಲಿ ಬೆಟ್ಟದ ಹಾಸುಗಲ್ಲು ಬದಲಾಯಿಸಿ ಗ್ರಾನೈಟ್ ಹಾಕಲಾಗುತ್ತಿದೆ. ಇದರ ಜತೆ ದಾನಿಗಳ ಸಹಕಾರದಲ್ಲಿ ಕೊಡಮಣಿತ್ತಾಯ ದೈವದ ಗುಡಿ ನವೀಕರಣ ನಡೆಯುತ್ತಿದೆ.ಜಿಪಂನ ಅಧಿಕಾರಿ ವರ್ಗ ಭೇಟಿ ಮೂಲಭೂತ ಕಾಮಗಾರಿಗಳಿಗೆ ಅನುದಾನ ನೀಡುವ ಭರವಸೆ ನೀಡಿದೆ.
ಸಮಿತಿಯವರು ಮನೆ ಮನೆಗೆ ಭೇಟಿ ನೀಡುತ್ತಿದ್ದು,ಉತ್ತಮ ಸ್ಪಂದನೆ ದೊರಕಿದೆ.ಈಗಾಗಲೇ ಸಾವಿರಕ್ಕಿಂತ ಅಧಿಕ ಮನೆಗಳನ್ನು ತಲುಪಲಾಗಿದೆ” ಎಂದರು.
ಶ್ರೀಮುಖ ಪತ್ರಿಕೆ ಬಿಡುಗಡೆಗೊಳಿಸಿದ ನಾಸಿಕ್ ನ ರವೀಂದ್ರ ಪಾಟೀಲ್ ಮಾತನಾಡಿ”ಕ್ಷೇತ್ರಗಳು ಬೆಳೆದು ಬರಲು ದಾನಿಗಳ ಸಹಕಾರವು ಅಗತ್ಯ.ಎಲ್ಲರ ನೆರವು ದೊರೆತರೆ ಕಾರ್ಯಕ್ರಮಗಳನ್ನು ನಡೆಸಲು ಸುಲಭ ಆಗುತ್ತದೆ” ಎಂದರು.
ಮಾಜಿ ಸಚಿವ ಅಭಯ ಚಂದ್ರ ಜೈನ್ ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಮಾತನಾಡಿ ಜೈನ ಸಮುದಾಯದ ಯುವಕರು ವಿದ್ಯಾವಂತರಾಗಿದ್ದು ನಾನಾ ರಂಗಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಆಶಾದಾಯಕ ವಿಚಾರ .ಮೂಲ ಭೂತ ಸೌಕರ್ಯಗಳಿಗೆ ಮಾತ್ರ ಸರಕಾರದ ಸಹಕಾರ ಕೇಳಲಾಗತ್ತಿದೆ.ಈ ಕೆಲಸಗಳು ನಡೆಯುವುದರಿಂದ ಇಲ್ಲಿನ ಜನತೆಗೂ ಸೌಲಭ್ಯಗಳು ಸಿಗಲಿವೆ ಎಂದರು.
ಗುರುವಾಯನಕೆರೆ
ಎಕ್ಸೆಲ್ ಕಾಲೇಜ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿದರು.
ಮಹಾ ಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರೂಪಿಸಿದರು.
ಸ್ವಾಗತ ಗೀತೆಯ ಧ್ವನಿ ಸುರುಳಿ ಬಿಡುಗಡೆ ಗೊಳಿಸಲಾಯಿತು.
ರವೀಂದ್ರ ಪಾಟೀಲ್ ದಂಪತಿಯನ್ನು ಗೌರವಿಸಲಾಯಿತು.
–ಶ್ರೀಮುಖ ಪತ್ರಿಕೆ-
ಫೆ.22ರಿಂದ ಮಾರ್ಚ್1ರ ವರೆಗೆ ನಡೆಯಲಿರುವ ಮಹಾ ಮಸ್ತಕಾಭಿಷೇಕ ಸಂದರ್ಭ ಜರಗುವ ಧಾರ್ಮಿಕ ಕಾರ್ಯಕ್ರಮ ವಿವರ ಒಳಗೊಂಡಿದೆ.