ವೇಣೂರು: ಲಕ್ಷಾಂತರ ರಾಮಭಕ್ತರ ಬಲಿದಾನ, ತ್ಯಾಗದ ಫಲವಾಗಿ ಜ.22ರಂದು ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯಾಗಲಿದೆ. ಆ ಪ್ರಯಕ್ತ ರಾಮ ಮಂತ್ರಾಕ್ಷತೆಯನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಶ್ರದ್ಧೆ, ಭಕ್ತಿ ಪೂಜ್ಯತೆಯಿಂದ ಮಾಡೋಣ ಎಂದು ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.
ವೇಣೂರಿನ ಭರತೇಶ ಸಮುದಾಯ ಭವನದಲ್ಲಿ ಕೆನರಾ ಬ್ಯಾಂಕ್ ಹಾಗೂ ವೇಣೂರು ಗ್ರಾ.ಪಂ. ಸಹಕಾರದಲ್ಲಿ ನಡೆದ ಪವಿತ್ರ ಮಂತ್ರಾಕ್ಷತೆಯ ಅಭಿಯಾನದ ಅಂಗವಾಗಿ ವಿವಿಧ ಉಪವಸತಿಗಳಿಗೆ ಮಂತ್ರಾಕ್ಷತೆಯ ಕಲಶಗಳನ್ನು ಹಸ್ತಾಂತರಿಸಿ ಅವರು ಆಶೀರ್ವದಿಸಿದರು.
ರಾಮ ಭಾರತದ ಭಾರತೀಯರ ಆತ್ಮ. ಧರ್ಮದ ಅಸ್ತಿತ್ವವಿದ್ದರೆ ದೇಶ ಸುಭಿಕ್ಷವಾಗಿರುತ್ತದೆ. ರಾಮ ನಾಮ ಸ್ಮರಣೆಯೊಂದಿಗೆ ಹನುಮಂತನ ಜಪವನ್ನು ಮಾಡುತ್ತ ರಾಮಮಂತಾಕ್ಷತೆಯ ಅಭಿಯಾನದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಾಮರಸ್ಯ ಸಂಯೋಜಕ ರವೀಂದ ಅವರು ಮಾತನಾಡಿ, ಕಳೆದ ೪೯೫ ವರ್ಷಗಳ ಸಂಘರ್ಷ ಅಂತಿಮ ಹಂತಕ್ಕೆ ಬಂದಿದೆ. ರಾಮಜನ್ಮಭೂಮಿಗಾಗಿ ೭೨ ಬಾರಿ ಯುದ್ಧ ನಡೆದಿದೆ. ಸುಮಾರು ಮೂರುಕಾಲು ಲಕ್ಷ ಮಂದಿ ಪ್ರಾಣತೆತ್ತಿದ್ದಾರೆ. ರಾಮನನ್ನು ಬಿಟ್ಟು ಭಾರತೀಯರು ಬದುಕಲು ಸಾಧ್ಯವಿಲ್ಲ. ರಾಮಮಂತ್ರಾಕ್ಷತೆಯನ್ನು ಪ್ರತಿಯೊಂದು ಹಿಂದು ಮನೆಗಳಿಗೆ ತಲುಪಿಸುವ ಗುರುತರ ಕಾರ್ಯ ನಮ್ಮ ಮೇಲಿದೆ ಎಂದರು.
ರಾ.ಸ್ವ.ಸಂಘದ ಪುತ್ತೂರು ಜಿಲ್ಲಾ ಸಹಕಾರ್ಯವಾಹ ಸಂತೋಷ್ ಕಾಪಿನಡ್ಕ, ವೇಣೂರು ತಾಲೂಕು ಸಂಘಚಾಲಕ್ ರಘುನಂದನ್ ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಪುರೋಹಿತ್ ಸ್ವಾಗತಿಸಿದರು. ವಿಜಯಗೌಡ ವಂದಿಸಿದರು.