ಮಾಸ್ಟರ್ ಗನ್ ಖ್ಯಾತಿಯ ಜಾನ್ ಡಿಸೋಜರಿಗೆ ಅರುವ ನಮ ಮಾತೆರ್ಲ ಒಂಜೆ ಕಲಾತಂಡದಿಂದ ಸನ್ಮಾನ ಹುಟ್ಟೂರಲ್ಲಿ ಸನ್ಮಾನ ಸ್ವೀಕರಿಸಿ ಧನ್ಯತೆ ಮೆರೆದ ಕೃಷಿಕಮಿತ್ರ!
ಅಳದಂಗಡಿ : ನಮ್ಮ ಮಾತೆರ್ಲ ಒಂಜಿ ಕಲಾತಂಡ ಅರುವ ಇವರ ವತಿಯಿಂದ ಆದಂಗಡಿಯ ಪಂಚಾಯತ್ ವಠಾರದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರ ಯಕ್ಷಗಾನ ಕಾರ್ಯಕ್ರಮದಲ್ಲಿ ವಿವಿಧ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಮೂವರು ವಿವಿಧ ಕ್ಷೇತ್ರದ ಸಾಧಕರ ಪೈಕಿ ಅಳದಂಗಡಿಯ ಜಾನ್ ಡಿ’ಸೋಜಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೈತರಿಗೆ ಅನುಕೂಲ ಆಗುವ ಕೃಷಿ ಬೆಳೆಗಳನ್ನು ರಕ್ಷಿಸುವ ಮಾಸ್ಟರ್ ಗನ್ ಎಂಬ ಸಾಧನದ ತಯಾರಿಯ ಮೂಲಕ ಇವರು ರಾಜ್ಯಡೆಲ್ಲೆಡೆ ಪ್ರಸಿದ್ದಿ ಪಡೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಜಾನ್ ಡಿಸೋಜ ಅವರು ಕಲಿತದ್ದು ಐಟಿಐ, ಅನಂತರ ಉದ್ಯೋಗ ಹುಡುಕಿ ಹೋದದ್ದು ಮುಂಬೈಗೆ. ಯಾರೇ ಬರಲಿ ತನ್ನ ಒಡಲಲ್ಲಿ ಸೇರಿಸಿಕೊಳ್ಳುವ ಮಹಾನಗರದಲ್ಲಿ ಜಾನ್ ಡಿಸೋಜಾ ಅವರು ಒಬ್ಬರಾದರು. ವಾಲ್ಟಸ್ ಎಂಬ ಕಂಪೆನಿಯಲ್ಲಿ ವೃತ್ತಿ ನೈಪುಣ್ಯತೆಯನ್ನು ಪಡೆದುಕೊಂಡರು. ಕಂಪೆನಿಯು ದುಬೈಯಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದಾಗ ದುಬೈಯಲ್ಲಿ ಎರಡು ವರ್ಷಗಳ ಕಾಲ ದುಡಿಯುವ ಅವಕಾಶ ಅವರಾದಾಯಿತು. ದುಬೈಗೆ ಹೋಗುವುದಕ್ಕೆ ಮಾನಸಿಕವಾಗಿ ಸಿದ್ಧವಾಗಿರದಿದ್ದರೂ ಕಂಪೆನಿಯ ಒತ್ತಾಸೆ ಅವರನ್ನು ದುಬೈವರೆಗೆ ಕರೆದೊಯ್ದಿತು. ಹೊಸ ಅನುಭವಗಳನ್ನು ನೀಡಿತು. ಕೆಲಸ ಹಾಗೂ ವೀಸಾ ಅವಧಿ ಮುಗಿದು ಸ್ವದೇಶಕ್ಕೆ ಹಿಂತಿರುಗಿದಾಗ ಮಹಾನಗರದ ಸಹವಾಸ ಬೇಡವೆನಿಸಿತು. ಊರಲ್ಲಿ ತನ್ನದಾದ ಸ್ವಂತ ಉದ್ಯಮ ಮಾಡಬೇಕೆಂಬ ಆಸೆ ಹೆಚ್ಚಾಯಿತು. ತನ್ನೂರಾದ ಅಳದಂಗಡಿಯಲ್ಲಿ ವೆಲ್ಡಿಂಗ್ ಉದ್ಯಮ ಆರಂಭಿಸಿದರು. ಯಾಕೋ ಏನೋ ಅದು ಯಶಸ್ಸು ಕಾಣಲಿಲ್ಲ. ತನ್ನೂರ ಪಕ್ಕದ ನಾರಾವಿ ಎಂಬಲ್ಲಿ ವೆಲ್ಡಿಂಗ್ ಶಾಪ್ ಶುರು ಮಾಡಿದರು. ಅಲ್ಲೂ ಯಶಸ್ಸು ಪಡೆಯುವಲ್ಲಿ ವಿಫಲ, ಮುಂದೇನು ಎಂಬ ಯೋಚನೆಯಲ್ಲಿದ್ದಾಗ ಅವರ ಕಣ್ಣಿಗೆ ಬಿದ್ದುದು ಮತ್ತೊಂದು ಗ್ರಾಮೀಣ ಪ್ರದೇಶ!
ತಾನು ಕಲಿತ, ಓಡಾಡಿದ ಪ್ರದೇಶವಾದ ವೇಣೂರಿನಲ್ಲಿ ಜೋವಿನ್ ವುಡ್ ಆಂಡ್ ಎಂಜಿನಿಯರಿಂಗ್ ವರ್ಕ್ಸ್ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿದರು. ವೇಣೂರಿನಲ್ಲಿ ಉತ್ತಮ ವ್ಯವಹಾರದ ನಿರೀಕ್ಷೆ ಅವರಲ್ಲಿತ್ತು. ಆದರೇನು ಅದಾಗಲೇ ಕೊರೊನಾ ವಕ್ಕರಿಸಿ ಇವರನ್ನು ಮನೆಯ ದಾರಿ ಹಿಡಿಯುವಂತೆ ಮಾಡಿತು. ಆದರೂ ಧೃತಿಗೆಡಲಿಲ್ಲ. ಮರದ ಮತ್ತು ವೆಲ್ಡಿಂಗ್ ಕೆಲಸಗಳನ್ನು ನಿರ್ವಹಿಸುತ್ತಿದ್ದ ಅವರಿಗೆ ಕೃಷಿ ಹಾಗೂ ರೈತರಿಗೆ ಸಂಬಂಧಿಸಿದ ಯಾವುದಾದರೂ ಉಪಕರಣಗಳನ್ನು ತಯಾರಿಸಬೇಕೆಂಬ ಯೋಚನೆ ಮೂಡಿತು.
*ಮಂಗ ಮತ್ತು ಕಾಡುಪ್ರಾಣಿಗಳನ್ನು ಬೆದರಿಸಲು ಮಾಸ್ಟರ್ ಗನ್*
ಅರಣ್ಯ ಪ್ರದೇಶ ಹಾಗೂ ಇತರ ಪ್ರದೇಶಗಳಲ್ಲಿಯೂ ಕೃಷಿಕರಿಗೆ ಮಂಗ ಮತ್ತು ಇತರ ಕಾಡುಪ್ರಾಣಿಗಳ ಹಾವಳಿ ಅಷ್ಟಿಷ್ಟಲ್ಲ. ರೈತ ಕುಟುಂಬದ ತುತ್ತಿನ ಚೀಲವನ್ನೇ ಕಬಳಿಸಬಲ್ಲವು. ಕಾಡು ಪ್ರಾಣಿಗಳು ತಿಂದು ಉಳಿದರೆ ಕೃಷಿಕರಿಗೆ ಎನ್ನುವಷ್ಟು ಮಟ್ಟಿಗೆ ಕೃಷಿಕರು ಬಸವಳಿದಿದ್ದರು. ಮಂಗಗಳ ಹಾವಳಿಗಂತೂ ಬೇಸತ್ತು ಕೃಷಿಯಿಂದಲೇ ವಿಮುಖರಾಗುವಂತಹ ಪರಿಸ್ಥಿತಿ. ಮಂಗಗಳನ್ನು ಓಡಿಸುವ ಬಂದೂಕು ಆದಾಗಲೇ ಸದ್ದು ಮಾಡಲಾರಂಭಿಸಿತ್ತು. ತನ್ನದೇ ಆದ ಯೋಚನೆ-ಯೋಜನೆಯಲ್ಲಿ ಹಾಗೂ ಕಾಡು ಪ್ರಾಣಿಗಳನ್ನು ಬೆದರಿಸಿ ಓಡಿಸುವ ಮಾಸ್ಟರ್ ಗನ್ ತಯಾರಿಸಿದರು. ಈ ಗನ್‌ಗಳಿಗೆ ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ಬಂತು. ಮರದ ಹಿಡಿ, ಗುಣಮಟ್ಟದ ಕಬ್ಬಿಣದ ನಳಿಕೆ, ಪಟಾಕಿ ಬಳಕೆಯ ಕೋವಿ ರೈತರನ್ನು ಆಕರ್ಷಿಸಿತು, ಪ್ರಚಾರ ಪಡೆದುಕೊಂಡಿತು. ೧೦.೦೦೦ ಕ್ಕೂ ಹೆಚ್ಚು ಕೋವಿಗಳನ್ನು ತಯಾರಿಸಿ ಮಾರಾಟ ಮಾಡಿರುವ ಸಂತೃಪ್ತಿ ಅವರದು. ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇವರ ಕೋವಿಗಿದೆ. ಕೋವಿ ತಯಾರಿಯ ಎಲ್ಲಾ ಪರಿಕರಗಳು ಇವರಲ್ಲೇ ಇರುವುದರಿಂದ ಕೈಗೆಟಕುವ ಬೆಲೆಗೆ ಕೋವಿಯೂ ಲಭ್ಯ.
*ಅಡಿಕೆ ಮರವೇರಲು ಟೀ ಸೈಕಲ್*
ಅಡಿಕೆ ಕೃಷಿಕರಿಗೆ ಔಷಧಿ ಸಿಂಪರಣೆ ಮರವೇರಿ ಅಡಿಕೆ ಕೊಯ್ದು ಮಾಡುವುದು ದೊಡ್ಡ ಸವಾಲು. ಈ ಕೌಶಲದ ಕಾರ್ಮಿಕರ ಕೊರತೆ, ಜತೆಗೆ ಕೃಷಿ ಕಾರ್ಮಿಕರು ಕ್ಲಪ್ತಕಾಲಕ್ಕೆ ಲಭ್ಯವಾಗದಿರುವುದರಿಂದ ಬೆಳೆಗಾರರು ಹೈರಾಣರಾಗುವುದೇ ಹೆಚ್ಚು. ಈ ಸಮಸ್ಯೆಗೆ ಪರಿಹಾರವಾಗಿ ಹೈಟೆಕ್ ದೋಟಿಗಳು, ಅಡಿಕೆ ಮರವೇರುವ ಬೈಕುಗಳು, ಇತರ ಉಪಕರಣಗಳು ಬಂದಿವೆ. ಆದರೂ ಕೆಲವೊಂದು ಕೃಷಿಕರ ಕೈಗೆಟಕುವ ದರದಲ್ಲಿ ಅದಿಲ್ಲ. ದರ ಕಡಿಮೆಯಿದ್ದರೂ ಕೆಲವೊಂದು ತಾಂತ್ರಿಕ ಸಮಸ್ಯೆಗಳು. ಇದನ್ನು ಮನಗಂಡು ಜಾನ್ ೩೩೮ ಅಡಿಕೆ ಬೆಳೆಗಾರರಿಗೆ ಅನುಕೂಲವಾಗಬಲ್ಲ ಸರಳವಾದ ಟ್ರೇ ಸೈಕಲ್ ತಯಾರಿಸಿದ್ದಾರೆ. ಜಾರುವ ಅಥವಾ ನಯವಾದ ಮರಗಳನ್ನು ಸುಲಭವಾಗಿ ಏರಬಹುದು. ಅಡಿಕೆ ಕೊಯ್ದು, ಔಷಧಿ ಸಿಂಪರಣೆ ಮಾಡಬಹುದು. ಮಹಿಳೆಯರೂ ಸೇರಿದಂತೆ ಎಲ್ಲಾ ವಯೋಮಾನದವರಿಗೂ ಅನುಕೂಲ. ಗಟ್ಟಿಮುಟ್ಟಾದ ಹಿಡಿಕೆ. ಸುರಕ್ಷತೆಗೆ ಬೆಲ್ಟ್ ಇದೆ. ಇದರಿಂದ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಅಡಿಕೆ ಕೊಯ್ದು, ಔಷಧಿ ಸಿಂಪರಣೆ ಕಾರ್ಯರ್ವಹಿಸುವ ಕೆಲಸಗಾರರಿಗೂ ಟೀ ಸೈಕಲ್ ಹೆಚ್ಚು ಪ್ರಯೋಜನಕಾರಿ.
*ಹೊಗೆ ರಹಿತ ಸ್ಟವ್; ಜಾನ್ ಅವರ ಹೊಸ ಆವಿಷ್ಕಾರ*
ಹೊಸತುಗಳಿಗೆ ಒಂದಿಷ್ಟು ಪರಿಷ್ಕರಣೆ ಹಾಗು ಕೃಷಿಕರಿಗೆ ಬೇಕಾದ ಯಂತ್ರೋಪಕರಣ ತಯಾರಿ ಆಸಕ್ತಿ ಮತ್ತಷ್ಟು ಹೆಚ್ಚಿತು. ಒಂದೆಡೆ ಗ್ಯಾಸ್ ದರ ಹೆಚ್ಚಳ; ಮತ್ತೊಂದೆಡೆ ಹೊಸ ಭರವಸೆ ಹುಟ್ಟಿಸಿದ ಸ್ಟೌವ್‌ಗಳು; ಇತ್ತೀಚಿಗಿನ ದಿನಗಳಲ್ಲಿ ಹೊಗೆ ರಹಿತವಾದ ಒಲೆಗಳು ಸದ್ದು ಮಾಡುತ್ತಿವೆ.
ಆದರೂ ಕೆಲವು ಒಲೆಗಳು ಕೆಲವೇ ತಿಂಗಳಲ್ಲಿ ಮೂಲೆ ಸೇರಿವೆ. ಕೆಲವರು ರಿಪೇರಿಗಾಗಿ ಇವರಲ್ಲಿಗೆ ತಂದು ಹಾಕಿದ್ದಾರೆ. ಇದನ್ನು ಮನಗಂಡು ಪರಿಸರ ಸಹ್ಯವಾದ ಹೊಗೆರಹಿತವಾದ ಒಲೆಗಳನ್ನು ತಾವೇ ತಯಾರಿಸಲು ಮುಂದಾದರು.
ಈಗಾಗಲೇ ಮಾರುಕಟ್ಟೆಗೆ ಬಂದ ಹೊಗೆ ರಹಿತ ಒಲೆಗಳ ಸಮಸ್ಯೆಗಳನ್ನು ಅಭ್ಯಾಸಿಸಿದ ನಂತರ ತಮ್ಮದೇ ಆದ ಉತ್ತಮ ಗುಣಮಟ್ಟದ ಕಬ್ಬಿಣವನ್ನು ಬಳಸಿಕೊಂಡು ಹೊಗೆರಹಿತ ಒಲೆಯನ್ನು ತಯಾರಿಸಿದ್ದಾರೆ ಬ್ಯಾಟರಿ, ವಿದ್ಯುತ್ ಪರಿವರ್ತಕ, ಇಂಡಿಕೇಟರ್, ಪ್ಯೂಸ್ ಒಳಗೊಂಡ ಈ ಒಲೆಯನ್ನು ೮-೧೦ ಗಂಟೆಗಳ ಕಾಲ ಚಾಲು ಸ್ಥಿತಿಯಲ್ಲಿಡಬಹುದು. ಬ್ಯಾಟರಿ ಇಲ್ಲದೆ ಸೋಲಾರ್ ಅಥವಾ ವಿದ್ಯುತ್‌ನಿಂದಲೂ ಚಾಲು ಸ್ಥಿತಿಯಲ್ಲಿಡಬಹುದು. ಈ ಓಲೆ ೧೦-೧೨ ಕೆಜಿ ಭಾರವಿದೆ. ಒಂದೆರಡು ಕೆಜಿ ಕಟ್ಟಿಗೆಗಳಿದ್ದರೆ ಸಾಕು, ಎಂಟತ್ತು ಜನರಿಗೆ ಬೇಕಾದ ಎಲ್ಲಾ ನಮೂನೆಯ ಅಡುಗೆಯನ್ನು ತಯಾರಿಸಿಕೊಳ್ಳಬಹುದು. ಕಾರ್ಖಾನೆಗಳಲ್ಲಿ ಸಿಗುವ ಮರದ ತುಂಡುಗಳು, ಮರದ ಹುಡಿ ಹಾಗೂ ಹಳ್ಳಿಗಳಲ್ಲಿ ಸಿಗುವ ಒಣ ಕಡ್ಡಿಗಳು ಅಥವಾ ಸಣ್ಣಸಣ್ಣ ಕಟ್ಟಿಗೆ ತುಂಡುಗಳನ್ನು ಬಳಸಿಕೊಂಡು ಶೇ. ೮೦ರಷ್ಟು ಗ್ಯಾಸ್ ಉಳಿತಾಯ ಮಾಡಬಹುದು. ಈಗಾಗಲೇ ಸುಮಾರು ೫೦೦ಕ್ಕೂ ಹೆಚ್ಚು ಸ್ಟೌವ್‌ಗಳನ್ನು ಮಾರಾಟ ಮಾಡಿದ್ದಾರೆ. ಬಹಳಷ್ಟು ಬೇಡಿಕೆಯೂ ಇದೆ.
ಮಂಗಗಳನ್ನು ಓಡಿಸಲು ಪಿಸ್ತೂಲು!
ಕೃಷಿಗೆ ತೊಂದರೆ ನೀಡುವ ಮಂಗಗಳನ್ನು ಹಾಗೂ ಕಾಡುಪ್ರಾಣಿಗಳನ್ನು ಓಡಿಸಲು ಮಾಸ್ಟರ್ ಗನ್ ತಯಾರಿಕೆಯ ನಂತರ ಈಗ ಮಂಗಗಳನ್ನು ಓಡಿಸಲು ಪಿಸ್ತೂಲು ತಯಾರಿಸಿದ್ದಾರೆ. ಆಕಾಶದೆತ್ತರಕ್ಕೆ ನೆಗೆದು ಮತ್ತೆ ಸಿಡಿಯುವ ಪಟಾಕಿಗಳನ್ನು ಇದರಲ್ಲಿ ಬಳಸಿಕೊಳ್ಳಬಹುದು. ಪಟಾಕಿಯ ಸದ್ದಿಗೆ ಮಂಗಗಳಾಗಲಿ, ಕಾಡುಪ್ರಾಣಿಗಳಾಗಲಿ ಬೆಚ್ಚಿ ಓಡುತ್ತವೆ ಎನ್ನುತ್ತಾರೆ ಜಾನ್. ಅಂಗಲದಲ್ಲಿ ಹರವಿದ ಅಡಿಕೆಯನ್ನು ಮಗುಚಿ ಹಾಕಲು ಸುಲಭ ಸಾಧನವನ್ನು ಅವರು ತಯಾರಿ ಮಾಡಿದ್ದಾರೆ. ಇದಕ್ಕೂ ಬೇಡಿಕೆ ಇದೆ.
ಹತ್ತಾರು ಮಂದಿಗೆ ಉದ್ಯೋಗ ನೀಡುತ್ತಿರುವ ಇವರು ಕೆಲಸವಿಲ್ಲದವರಿಗೂ ಕೆಲಸ ಕಲಿಸಿ ಸ್ವಉದ್ಯೋಗಕ್ಕೆ ಪ್ರೋತ್ಸಾಹ ನೀಡುತ್ತಾರೆ. ಐಟಿಐ ವಿದ್ಯಾರ್ಥಿಗಳು ಇಲ್ಲಿ ಬಂದು ತರಬೇತಿ ಪಡೆಯುತ್ತಾರೆ. ಒಂದು ಮರದ ಪೆಟ್ಟಿಗೆಯೊಳಗೆ ತೆಂಗಿನ ತುರಿಮಣೆ ಹಾಗೂ ತುಂಡರಿಸುವ ಮೆಟ್ಟುಕತ್ತಿ ತಯಾರಿಸಿದ್ದಾರೆ. ಬಿಡುವಿನ ಸಮಯ ಸಿಕ್ಕರೆ ಕಟ್ಟಡದ ಮಾಡಿನ ಕೆಲಸಗಳನ್ನು ಇತರ ಕೆಲಸಗಳನ್ನು ವಹಿಸಿಕೊಳ್ಳುತ್ತಾರೆ. ಕಿಟಕಿ, ಬಾಗಿಲು, ಪೀಠೋಪಕರಣಗಳನ್ನು ತಯಾರಿಸುತ್ತಾರೆ.