ಆರಂಬೋಡಿ: ಇಲ್ಲಿಯ ಪಾಣಿಮೇರುವಿನ ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರ ವಿರುದ್ಧ ಆರಂಬೋಡಿಯ ನಿವಾಸಿ ಕಿರಣ್ ಮಂಜಿಲ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿರುವುದಾಗಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪಾಣಿಮೇರುವಿನಲ್ಲಿ ಲಾರಿಯಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆ ನಿತೀನ್ ಪೂಜಾರಿ ಎಂಬವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಗಿರೀಶ್ ಮೋಹನ್ ಎಸ್.ರವರ ದೂರಿನಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳೀಯ ಸಿಸಿ ಕೆಮರಾ ಪರಿಶೀಲಿಸಿದಾಗ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದು ದೃಢಪಟ್ಟಿತ್ತು.
`ತನಿಯಪ್ಪ ಎಂಬವರು ಮರಳುಗಾರಿಕೆಗೆ ಅನುಮತಿ ಪಡೆದುಕೊಂಡಿದ್ದು, ವ್ಯವಹಾರವನ್ನು ಕಿರಣ್ ಮಂಜಿಲ ಎಂಬವರು ನೋಡಿಕೊಳ್ಳುತ್ತಿದ್ದಾರೆ. ಮರಳನ್ನು ಈಗ ಸಾಗಾಟ ಮಾಡಲು ಅನುಮತಿ ಇಲ್ಲದಿದ್ದರೂ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ನಾನು ಹಾಗೂ ನನ್ನ ಸಹಪಾಠಿಗಳು ಇಲಾಖೆಗೆ ದೂರು ನೀಡಿದ್ದೆವು. ಇದರಿಂದ ಕುಪಿತಗೊಂಡ ಕಿರಣ್ ಮಂಜಿಲ ಅವರು ನನಗೆ ಪೋನ್‌ನಲ್ಲಿ ಹಾಗೂ ಮನೆಗೆ ಬಂದು ಪೋಷಕರಿಗೆ ಅವಾಚ್ಯ ಶಬ್ದಗಳಿಂದ ಬೈದುದ್ದಲ್ಲದೆ ನನಗೆ ಜೀವಬೆದರಿಕೆ ಒಡ್ಡಿದ್ದಾರೆ. ಈಗಾಗಿ ನನಗೆ ಹಾಗೂ ನನ್ನ ಸಹಪಾಠಿಗಳಿಗೆ ರಕ್ಷಣೆ ಕೊಡಿ’ ಎಂದು ಕುಂಜಾಡಿಯ ನಿತಿನ್ ಪೂಜಾರಿ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.