ಸಂಸದ ಪ್ರತಾಪ್ ಸಿಂಹ ವಿರುದ್ಧ ಭುಗಿಲೆದ್ದ ಆಕ್ರೋಶ, ಎಲ್ಲೆಲ್ಲೂ ಹೋರಾಟ!
ಪಾರ್ಲಿಮೆಂಟ್ ಒಳಗಡೆ ಇಂದು ನಡೆದ ಘಟನೆ ಆಕ್ರೋಶದ ಕಿಚ್ಚು ಹೊತ್ತಿಸಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ 8ನೇ ದಿನ ಭದ್ರತೆಯ ಉಲ್ಲಂಘನೆ ಆಗಿದೆ. ಯುವಕರು ಲೋಕಸಭೆ ಸಂದರ್ಶಕರ ಗ್ಯಾಲರಿಯಿಂದ ಕೆಳಗೆ ಜಿಗಿದು ಸಂಸತ್ತಿನ ಭದ್ರತಾ ನಿಯಮ ಛಿದ್ರಗೊಳಿಸಿರುವುದು, ಎಲ್ಲೆಲ್ಲೂ ಆಕ್ರೋಶ ಮೊಳಗುವಂತೆ ಮಾಡಿದೆ. ಇಷ್ಟೆಲ್ಲದರ ನಡುವೆ ಕರ್ನಾಟಕದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೂಡ ಆಕ್ರೋಶ ಮೊಳಗಿದೆ.
ಹೌದು, ಆರೋಪಿಗಳು ಕರ್ನಾಟಕ ಸಂಸದರಾದ ಪ್ರತಾಪ್ ಸಿಂಹ ಅವರ ಹೆಸರನ್ನು ಉಲ್ಲೇಖಿಸಿ ವಿಸಿಟರ್ ಪಾಸ್ ಪಡೆದು ಸಂಸತ್ತಿಗೆ ಪ್ರವೇಶಿಸಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಹೀಗೆ ಇದೇ ವಿಚಾರವನ್ನು ಮುಂದೆ ಇಟ್ಟುಕೊಂಡು ವಿರೋಧ ಪಕ್ಷಗಳು ಈಗ ಬಿಜೆಪಿ ವಿರುದ್ದವೂ ಹೋರಾಟ ಆರಂಭಿಸಿವೆ. ಇದರ ಜೊತೆ, ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಪ್ರತಿಭಟನೆಯ ಬಿರುಗಾಳಿ ಸೃಷ್ಟಿಯಾಗಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಅವರ ಹೆಸರು ಟ್ರೆಂಡ್ ಆಗುತ್ತಿದೆ.