ಕಾಡಾನೆಯೊಂದಿಗೆ ಕಾದಾಡಿ ವೀರಮರಣವನ್ನಪ್ಪಿದ ಅರ್ಜುನ! ಸಕಲೇಶಪುರ ಅರಣ್ಯದಲ್ಲಿ ಕಾರ್ಯಾಚರಣೆ ವೇಳೆ ಅವಘಡ
ಮೈಸೂರು, ಡಿಸೆಂಬರ್ 05: ಹೆಸರಿನಲ್ಲಿಯೇ ಗಾಂಭೀರ್ಯ ಹೊಂದಿದ್ದ ಸಾಕಾನೆ, ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಕಾಡಾನೆಯೊಂದಿಗೆ ಕಾದಾಡಿ ವೀರಮರಣವನ್ನಪ್ಪಿದೆ ಎನ್ನುವ ಸುದ್ದಿ ಎಲ್ಲರನ್ನು ನೋವಿನ ಕಂದಕಕ್ಕೆ ತಳ್ಳಿದೆ. ಅದರಲ್ಲೂ ಅದು ವಾಸ್ತವ್ಯ ಹೂಡಿದ್ದ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಆನೆ ಶಿಬಿರದಲ್ಲಂತೂ ನೀರವ ಮೌನ ಮನೆ ಮಾಡಿದೆ.
ಮೊದಲಿಗೆ ಪುಂಡನಾಗಿ ಕೇಡಿ, ರೌಡಿ, ಕೋಪಿಷ್ಟ ಎಂದೆಲ್ಲ ಕರೆಯಿಸಿಕೊಂಡಿದ್ದರೂ ಆ ನಂತರ ಅರ್ಜುನ ಎಲ್ಲರ ಪ್ರೀತಿಗೆ ಪಾತ್ರನಾಗುವುದರೊಂದಿಗೆ ಮೈಸೂರು ದಸರಾದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದನು. ಆದರೆ ವಯಸ್ಸಿನ ಕಾರಣದಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುಗೆ ನೀಡಿ ತಾನು ನಿಶಾನೆ ಆನೆಯಾಗಿ ಜಂಬೂಸವಾರಿ ಮುನ್ನಡೆಸುವ ಕಾರ್ಯವನ್ನು ವಹಿಸಿಕೊಂಡಿದ್ದನು. ಆದರೆ ಈಗ ಕಾಡಾನೆಗಳಿಂದ ದಾಳಿಗೊಳಗಾಗಿ ಸಾವನ್ನಪ್ಪಿದ ಸಾಕಾನೆಗಳ ಸಾಲಿಗೆ ಅರ್ಜುನ ಸೇರ್ಪಡೆಯಾಗಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗುತ್ತಿದೆ.
ಕಾಡಾನೆಗಳೊಂದಿಗೆ ಕಾದಾಡಿ ಸತ್ತ ಸಾಕಾನೆಗಳ ದೊಡ್ಡ ಪಟ್ಟಿಯೇ ಇದೆ ಅದರಲ್ಲೀಗ ಅರ್ಜುನ ಸೇರಿದ್ದಾನೆ. ಇಲ್ಲಿವರೆಗೆ ಬಳ್ಳೆ ಶಿಬಿರ ರಾಜನಂತಿದ್ದ ಅರ್ಜುನ ಅಕಾಲಿಕ ಸಾವಿಗೆ ತುತ್ತಾಗಿರುವುದು ತಾಲೂಕಿನ ಜನರನ್ನು, ಪ್ರಾಣಿಪ್ರಿಯರನ್ನು ದುಃಖ ಆವರಿಸಿದೆ. ಅರ್ಜುನನಿಗೆ ವಯಸ್ಸಾದ ಕಾರಣ ಕಾಡು ಪ್ರಾಣಿಗಳ ಕಾರ್ಯಾಚರಣೆ ಹೊರತುಪಡಿಸಿ ಬಿಡುವಿನ ವೇಳೆಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾವನದ ಮಧ್ಯೆ ಇರುವ ಐತಿಹಾಸಿಕ ಬಳ್ಳೆ ಆನೆ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದನು.
ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಪ್ರಾಣಿಪ್ರಿಯರು
ಈ ಹಿಂದೆ 2021ರಲ್ಲಿ ಇದೇ ಶಿಬಿರದಲ್ಲಿದ್ದ ದುರ್ಗಾಪರಮೇಶ್ವರಿ ಹೆಣ್ಣಾನೆಗೆ ಮರಿಜನಿಸಲು ಈತ ಕಾರಣನಾಗಿದ್ದನು. ಬಳ್ಳೆ ಶಿಬಿರಕ್ಕೆ ಆಗಮಿಸುತ್ತಿದ್ದವರು ಈತನೊಂದಿಗೆ ಸೇಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದರು. ಇದೀಗ ಅದೇ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮತ್ತೆ ಹುಟ್ಟಿ ಬಾ ಅರ್ಜುನ, ಅರ್ಜುನ ಮಿಸ್ ಯು ಎಂದು ಸಂತಾಪ ಸೂಚಿಸುತ್ತಿರುವುದು ಅರ್ಜುನನ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಬಳ್ಳೆ ಶಿಬಿರದಲ್ಲಿದ್ದ ಅರ್ಜುನ, ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಲ್ಲದೇ, ತನ್ನ ವಿಶಿಷ್ಟ ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಕ್ಯಾಪ್ಟನ್ ಅರ್ಜುನನಾಗಿ ಉಳಿದಿದ್ದ. 1968ರಲ್ಲಿ ಕೊಡಗು ಜಿಲ್ಲೆಯ ತಿತಿಮತಿ ಬಳಿಯ ಬೆಂಡೆಕಟ್ಟೆಯಲ್ಲಿ ಖೆಡ್ಡಾ ವಿಧಾನದಲ್ಲಿ 15 ವರ್ಷದ ಪುಂಡ ಅರ್ಜನನನ್ನು ಸೆರೆ ಹಿಡಿದು ಪಳಗಿಸಲಾಗಿತ್ತು. 2000ರ ಇಸವಿಯಿಂದ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಅರ್ಜುನ 3 ವರ್ಷ ವಿವಿಧ ಕಾರಣದಿಂದ ದಸರಾದಿಂದ ದೂರ ಉಳಿದಿದ್ದ. ಬಲರಾಮ ಆನೆ ಅಂಬಾರಿ ಹೊರುವ ಕಾರ್ಯದಿಂದ ನಿವೃತ್ತಿ ಹೊಂದಿದ ಮೇಲೆ 2012ರಿಂದ 2019 ರವರೆಗೆ ಯಶಸ್ವಿಯಾಗಿ ಅಂಬಾರಿ ಹೊರುವ ಕಾರ್ಯವನ್ನು ನಿರ್ವಹಿಸಿದ್ದನು.