ಅಕ್ರಮ ರಕ್ತಚಂದನ ಸಾಗಾಟ: ಆರೋಪಿಗಳಿಬ್ಬರ ಸೆರೆ ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ
ವೇಣೂರು, ಆ. 11: ಅಕ್ರಮವಾಗಿ ರೂ. 6 ಲಕ್ಷದಷ್ಟು ಬೆಲೆಬಾಳುವ ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಇಂದು ವೇಣೂರು ಅರಣ್ಯಾಧಿಕಾರಿಗಳು ರೆಂಡ್ ಹ್ಯಾಂಡಾಗಿ ಬಂಧಿಸಿದ್ದಾರೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಗುರುವಾಯನಕೆರೆ ನಿವಾಸಿ ದೀಕ್ಷಿತ್ ಹಾಗೂ ಮಾವಿನಕಟ್ಟೆ ನಿವಾಸಿ ಖಾಲಿದ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಕರಿಮಣೇಲುವಿನ ಸಂತೋಷ್ ಪರಾರಿಯಾಗಿದ್ದಾನೆ.
ಆರೋಪಿಗಳು ಕರಿಮಣೇಲು ಗ್ರಾಮದಿಂದ ರಕ್ತಚಂದನವನ್ನು ಕಡಿದು ತುಂಡುಗಳಾಗಿ ಪರಿವರ್ತಿಸಿ ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಬೆಳ್ತಂಗಡಿ-ಬಂಟ್ವಾಳ ಗಡಿ ಭಾಗದ ವಾಮದಪದವು ಸಮೀಪದ ಮಾವಿನಕಟ್ಟೆ ಬಳಿ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ವಾಹನ ಸಹಿತ ೧೨೫ ಕೆ.ಜಿ. ರಕ್ತಚಂದನದ ತುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಲಯ ಅರಣ್ಯಾಧಿಕಾರಿ ಮಹೀಮ್ ಎಂ. ಜನ್ನು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.