ದೇಶದ ಕಾನೂನಿನಲ್ಲಿ ಪರಿಷ್ಕರಣೆ: ಅತ್ಯಾಚಾರಿಗಳಿಗೆ ಮರಣದಂಡನೆ
ನವದೆಹಲಿ, ಆಗಸ್ಟ್ 11: ಕೇಂದ್ರ ಸರ್ಕಾರವು ಇಂದು ಸಂಸತ್ತಿನಲ್ಲಿ ಹೊಸ ಮಸೂದೆಗಳನ್ನು ಮಂಡಿಸಿದೆ. ಬ್ರಿಟಿಷ್ ಕಾಲದ ಕಾನೂನುಗಳನ್ನು ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ಇವತ್ತಿನ ಲೋಕಸಭೆ ಕಲಾಪದಲ್ಲಿ ಗೃಹ ಸಚಿವರು, ದೇಶದ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತರುವ ಕುರಿತು ಪ್ರಸ್ತಾಪ ಮಾಡಿ, ಮೂರು ಮಸೂದೆಗಳನ್ನು ಮಂಡಿಸಿದರು.
ಇಂಡಿಯನ್ ಪಿನಲ್ ಕೋಡ್ ಬದಲಿಗೆ ‘ಭಾರತೀಯ ನ್ಯಾಯ ಸಂಹಿತಾ’ ಮಸೂದೆ ಕ್ರಿಮಿನಲ್, ಪ್ರೊಸಿಜರ್ ಬದಲಿಗೆ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ’ ಮಸೂದೆ ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಿಗೆ ‘ಭಾರತೀಯ ಸಾಕ್ಷ್ಯ’ ಮಸೂದೆಯನ್ನು ಪರಿಷ್ಕರಣೆ ಮಾಡುವುದಾಗಿ ಅಮಿತ್ ಶಾ ತಿಳಿಸಿದ್ದಾರೆ.
ದೇಶದ್ರೋಹ ಸೆಕ್ಷನ್ ರದ್ದು ಮಾಡುತ್ತೇವೆ ಎಂದು ತಿಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತರುವ ಕುರಿತು ಪ್ರಮುಖ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಹೊಸ ಮಸೂದೆಗಳಲ್ಲಿ ಶಿಕ್ಷೆಗಳು ಬದಲಾಗುತ್ತಿದ್ದು, ಚುನಾವಣೆಯ ಸಮಯದಲ್ಲಿ ಮತದಾರರಿಗೆ ಲಂಚ ನೀಡುವವರಿಗೆ ಒಂದು ವರ್ಷ ಜೈಲು ಶಿಕ್ಷೆ, ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ 20 ವರ್ಷಗಳ ಜೈಲು ಶಿಕ್ಷೆ ಬದಲು ಜೀವಾವಧಿ ಶಿಕ್ಷೆ ಹಾಗೂ ಅಪ್ರಾಪ್ತರ ಅತ್ಯಾಚಾರದ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ನೀಡುವ ಬಗ್ಗೆ ಐಪಿಸಿಯನ್ನು ಬದಲಾಯಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.