ಮುಜರಾಯಿ ದೇವಾಲಯಗಳ ಅರ್ಚಕರಿಗೆ ಸಿಹಿಸುದ್ದಿ ‘ಸಿ’ ವರ್ಗದ ದೇವಾಲಯಗಳ ಅರ್ಚಕರು ಮತ್ತು ಕುಟುಂಬದವರು ‘ಎ’ ವರ್ಗದ ದೇವಾಲಯಗಳಲ್ಲಿ ವಿಶೇಷ ದರ್ಶನ, ವಸತಿ ವ್ಯವಸ್ಥೆ ಪಡೆಯಲು ಸುತ್ತೋಲೆ
ಕರ್ನಾಟಕ ಸರ್ಕಾರದ ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಈ ಕುರಿತು ಸುತ್ತೋಲೆ ಪ್ರಕಟಿಸಿದೆ. ಇದು ಕರ್ನಾಟಕ ರಾಜ್ಯದ ‘ಸಿ’ ವರ್ಗಗಳ ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ಕುಟುಂಬದವರು ‘ಎ’ ವರ್ಗದ ದೇವಾಲಯಗಳಲ್ಲಿ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.
ಈ ಸುತ್ತೋಲೆಗೆ ಶ್ರೀವತ್ಸ, ರಾಜ್ಯಾಧ್ಯಕರು, ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ (ರಿ), ಬೆಂಗಳೂರು ಇವರ ಪತ್ರವನ್ನು ಉಲ್ಲೇಖ ಮಾಡಲಾಗಿದೆ.
ಸುತ್ತೋಲೆಯ ವಿವರಗಳು; ಪ್ರವರ್ಗ ‘ಸಿ’ ವರ್ಗಗಳ ಅರ್ಚಕರು, ಕುಟುಂಬದವರು ದೇವಾಲಯಗಳಿಗೆ ಭೇಟಿ ನೀಡಿದಾಗ ಶೀಘ್ರ ದರ್ಶನಕ್ಕೆ ಹಾಗೂ ವಸತಿ ಸೌಲಭ್ಯ ಇದ್ದರೆ ‘ಸಿ’ ವರ್ಗಗಳ ಅರ್ಚಕರಿಗೆ ಅನುಕೂಲ ಕಲ್ಪಿಸಲು ಎಲ್ಲಾ ಪವರ್ಗ ‘ಎ’ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸುತ್ತೋಲೆ ಮೂಲಕ ಆದೇಶ ಮಾಡಬೇಕೆಂದು ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ ಕೋರಿತ್ತು.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಒಳಪಡುವ ಪವರ್ಗ ‘ಸಿ’ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೇವಾಲಯದ ಅರ್ಚಕರಿಗೆ ಏಕರೂಪದ ಗುರುತಿನ ಚೀಟಿಯನ್ನು ನೀಡುವ ಸಲುವಾಗಿ ಈ ಕೂಡಾ ಲಗತ್ತಿಸಿರುವ, ನಮೂನೆಯಂತೆ ಜಿಲ್ಲಾವಾರು, ತಾಲ್ಲೂಕುವಾರು ಕೋಡನ್ನು ನೀಡಲಾಗಿದೆ. ಆಯಾ ಜಿಲ್ಲಾ ಮತ್ತು ತಾಲೂಕುಗಳಿಗೆ ನೀಡಲಾದ ಕೋಡನ್ನು ಬಳಸಿ, ಗುಲಾಬಿ ಬಣ್ಣದ ಗುರುತಿನ ಚೀಟಿಯನ್ನು ಸಂಬಂಧಪಟ್ಟ ಅಪರ ಜಿಲ್ಲಾಧಿಕಾರಿಯ ಸಹಿಯೊಂದಿಗೆ ತಾಲ್ಲೂಕುವಾರು ಪ್ರತಿಯೊಬ್ಬ ಅರ್ಚಕರಿಗೆ ಕೂಡಲೇ ವಿತರಿಸಲು ಹಾಗೂ ವಿತರಿಸಿದ ಬಗೆ, ಕಛೇರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.
ಮುಜರಾಯಿ ಇಲಾಖೆಯು ತನ್ನ ದೇವಾಲಯಗಳಲ್ಲಿ ವಾರ್ಷಿಕ ಆದಾಯದ ಆಧಾರದ ಮೇಲೆ ಎ, ಬಿ ಮತ್ತು ಸಿ ಎಂದು ವಿಭಾಗ ಮಾಡಿದೆ. ‘ಸಿ’ ವರ್ಗದ ದೇವಾಲಯಗಳ ಅರ್ಚಕರು ಮತ್ತು ಕುಟುಂಬದವರು ‘ಎ’ ವರ್ಗದ ದೇವಾಲಯಗಳಲ್ಲಿ ವಿಶೇಷ ದರ್ಶನ, ವಸತಿ ವ್ಯವಸ್ಥೆ ಪಡೆಯಲು ಈ ಸುತ್ತೋಲೆ ಪ್ರಕಟಿಸಲಾಗಿದೆ. ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಅಧಿಕ ದೇವಾಲಯಗಳಿವೆ. ಕೆಲವು ದಿನಗಳ ಹಿಂದೆ ಇಲಾಖೆ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.