ಆ. 2ರವರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ತುಂತುರು ಮಳೆ ಆಗಸ್ಟ್ 3-4ರಂದು ವರುಣಾರ್ಭಟ ಜೋರು, ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು, ಜುಲೈ 30: ಕರ್ನಾಟಕದಾದ್ಯಂತ ಸಕ್ರೀಯಗೊಂಡಿದ್ದ ಮುಂಗಾರು ಮಳೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಮಳೆ ಕಡಿಮೆ ಆಗಿದೆ, ಕರಾವಳಿಗೆ ಮುಂದಿನ ಮೂರು ದಿನ ಬಿಟ್ಟು ಮತ್ತೆ ಮಳೆ ಚುರುಕಾಗಲಿರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಒಂದು ತಿಂಗಳಿನಿಂದ ಸುರಿದಿದ್ದ ಅತ್ಯಧಿಕ ಮಳೆ ತಾತ್ಕಾಲಿಕವಾಗಿ ವಿರಾಮ ನೀಡಿದೆ. ಇದೀಗ ಆಗಸ್ಟ್ ೩ ಹಾಗೂ ೪ರಂದು ವ್ಯಾಪಕವಾಗಿ ಈ ಜಿಲ್ಲೆಗಳಲ್ಲಿ ವರುಣಾರ್ಭಟ ಕಂಡು ಬರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಂದಿನಿಂದ ಮುಂದಿನ ಆಗಸ್ಟ್ ೨ರವರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ತುಂತುರು ಮಳೆ ಆಗಬಹುದು. ಈಗಷ್ಟೇ ಪ್ರವಾಹ ಭೀತಿಯಿಂದ ಹೊರ ಬಂದ ಕರಾವಳಿ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಒಳನಾಡಿಗೆ ಹಗುರ ಮಳೆ ಸಾಧ್ಯತೆ
ರೈತರು ಜಮೀನುಗಳಲ್ಲಿ ಕಾಲಿಡದಷ್ಟು ಮಳೆ ದಿನನಿತ್ಯ ಸುರಿಯುತ್ತಲೇ ಇತ್ತು. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಆಯಿತು, ಇದೀಗ ರೈತರು, ಕೂಲಿ ಕೆಲಸದಾಳುಗಳು ಮತ್ತೆ ಹೊಲಗಳತ್ತ ಮುಖ ಮಾಡಿದ್ದಾರೆ. ಪೈರುಗಳಿಗೆ ರಸಗೊಬ್ಬರ-ರಸಾಯನಿಕ ಸಿಂಪಡಣೆಯ ಕೆಲಸವಾಗುತ್ತಿದೆ.
ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ದಾಖಲು
ಕಳೆದ ೨೪ ಗಂಟೆಗಳಲ್ಲಿ ಉತ್ತರ ಕನ್ನಡ, ಧರ್ಮಸ್ಥಳ, ದಕ್ಷಿಣ ಕನ್ನಡ, ಕ್ಯಾಸಲ್ ರಾಕ್, ಕಾರವಾರ, ಚಿಕ್ಕಮಗಳೂರು, ಬೆಳಗಾವಿ, ಯಾದಗಿರಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆ ಸಾಧಾರಣವಾಗಿ ಮಳೆ ಆಗಿದೆ. ಬೆಂಗಳೂರು ನಗರದಲ್ಲಿ ಎರಡು ದಿನದಿಂದ ಅಲ್ಲಲ್ಲಿ ತುಂತುರು ಮಳೆ ಆಗಿತ್ತು. ಭಾನುವಾರ ಆಗಾಗ ಮೋದ ಕವಿದ ವಾತಾವರಣ ಕಂಡು ಬಂದಿದೆ.