ಮೃತ ಶಿಲ್ಪಾ ಆಚಾರ್ಯ ಮನೆಗೆ ಭೇಟಿ ನೀಡಿದ ಡಿವೈಎಫ್‌ಐ ನಿಯೋಗ ಶಿಲ್ಪಾ ಕುಟುಂಬಸ್ಥರ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ಸೂಚಿಸಿದ ಮುಖಂಡರು
ವೇಣೂರು/ಮಂಗಳೂರು, ಜು. 29: ಇತ್ತೀಚೆಗೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿ ವೈದ್ಯರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಜೀವವನ್ನೇ ಕಳೆದುಕೊಂಡ ವೇಣೂರಿನ ಶಿಲ್ಪಾ ಆಚಾರ್ಯ ಮನೆಗೆ ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿ, ತಮ್ಮ ಹೋರಾಟಕ್ಕೆ ಪೂರ್ಣ ಬೆಂಬಲ ಸೂಚಿಸುವುದಾಗಿ ತಿಳಿಸಿದೆ.
ಹೆರಿಗೆಗೆಂದು ತೆರಳಿದ್ದ ಶಿಲ್ಪಾ ಆಚಾರ್ಯ ಅವರ ಸಾವಿಗೆ ಶಸ್ತ್ರಚಿಕಿತ್ಸೆಯ ವೇಳೆ ನಡೆದ ವೈದ್ಯರ ಎಡವಟ್ಟು ಎಂದು ಆಪಾದಿಸಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು.
ಕೋಮಕ್ಕೆ ತೆರಳಿ ಪ್ರಾಣವನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ಕಾರಣರಾದ ವೈದ್ಯರ ಹಾಗೂ ಎಜೆ ಆಸ್ಪತ್ರೆಯ ವಿರುದ್ಧ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮಕೈಗೊಳ್ಳಲು ಹಾಗೂ ಸಾವಿಗೆ ನ್ಯಾಯಯುತ ಪರಿಹಾರವನ್ನು ಒದಗಿಸಿಕೊಡುವವರೆಗೂ ಕುಟುಂಬ ನಡೆಸುವ ಹೋರಾಟದ ಜೊತೆ ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದೆ ಹಾಗೂ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಎಲ್ಲಾ ಸಹಕಾರವನ್ನು ನೀಡಲಿದೆ ಎಂದು ಅದು ತಿಳಿಸಿದೆ.
ನಿಯೋಗದಲ್ಲಿ ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಯುವ ವಕೀಲ ಮನೋಜ್ ವಾಮಂಜೂರು, ಶ್ರೀನಾಥ್ ಕಾಟಿಪಳ್ಳ, ಮಿಥುನ್ ಕುತ್ತಾರ್, ಸಿಪಿಐಎಂ ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಸದಾಶಿವದಾಸ್, ಸಿಪಿಐಎಂ ಜಿಲ್ಲಾ ಮುಖಂಡರಾದ ವಸಂತಿ ಕುಪ್ಪೆಪದವು, ಕುಸುಮ ಆಚಾರಿ, ನೋಣಯ್ಯ ಗೌಡ, ಸಾಮಾಜಿಕ ಕಾರ್ಯಕರ್ತರಾದ ಬಾವಾ ಪದರಂಗಿ ಮುಂತಾದವರು ಉಪಸ್ಥಿತರಿದ್ದರು.