ನಂದಿನಿ ಹಾಲಿನ ದರ 3 ರೂಪಾಯಿ ಏರಿಕೆ! ಹೊಸ ದರ ಆಗಸ್ಟ್ 1ರಿಂದ ಜಾರಿಗೆ
ಬೆಂಗಳೂರು: ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕರ್ನಾಟದಲ್ಲಿ ನಂದಿನಿ ಹಾಲಿನ ದರವನ್ನ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇನ್ನು ಈ ಹೊಸ ದರವು ಇದೇ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ಬೆಲೆ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಲು ಇಂದು ಮಹತ್ವದ ಸಭೆ ಕರೆಯಲಾಗಿತ್ತು. ಇದೇ ಸಭೆಯಲ್ಲಿ ಬೆಲೆ ಏರಿಕೆಗೆ ಅನುಮತಿ ನೀಡಲಾಗಿದೆ.
ಅಂದಹಾಗೆ ಕೆಎಂಎಫ್ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರು 3 ರೂಪಾಯಿ ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಿದ್ದಾರೆ. ಹಾಗೇ ಇದೀಗ ಹೆಚ್ಚಳವಾದ 3 ರೂಪಾಯಿ ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರಂತೆ. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆಯನ್ನು ನಡಿದ್ದರು. ಇದೇ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.
2 ಗಂಟೆ ಕಾಲ ನಡೆದ ಮೀಟಿಂಗ್!
ಹೌದು, ನಂದಿನ ಹಾಲಿನ ದರ ಪರಿಷ್ಕರಣೆ ಕುರಿತು ಚರ್ಚೆಗೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಬೆಲೆ ಹೆಚ್ಚಳದ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ನಂದಿನಿ ಹಾಲಿನ ದರ ಪರಿಷ್ಕರಣೆ ಸಂಬಂಧ ನಡೆದ ಸಭೆ ಸಂಜೆ 7 ಗಂಟೆ ಸುಮಾರಿಗೆ ಶುರುವಾಗಿತ್ತು. ಎರಡು ಗಂಟೆ ಕಾಲ ನಡೆದ ಸಭೆಯಲ್ಲಿ ಬಹಳಷ್ಟು ವಿಚಾರ ಚರ್ಚೆ ಆಗಿವೆ. ಮಹತ್ವದ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಕಿಂಗ್!
20 ವರ್ಷದಲ್ಲಿ ಕರ್ನಾಟಕದ ಹಾಲು ಉತ್ಪಾದನೆ ಮೂರು ಪಟ್ಟು ಹೆಚ್ಚಾಗಿದ್ದರೆ, ಕೇರಳದ ಹಾಲು ಉತ್ಪಾದನೆ ಮಾತ್ರ ಪಾತಾಳ ಸೇರುತ್ತಿದೆ. 2001-02ರಲ್ಲಿ ಕೇರಳ ಹಾಲು ಉತ್ಪಾದನೆ ಸಾಮರ್ಥ್ಯ 2,718 ಟನ್ ಇತ್ತು. ಆದರೆ ಕೇರಳದ ಹಾಲು ಉತ್ಪಾದನೆ 2021-22ರ ಹೊತ್ತಿಗೆ 2,532 ಟನ್‌ಗೆ ಕುಸಿತ ಕಂಡಿದೆ. ಅಂದರೆ ನೀವೆ ಲೆಕ್ಕ ಹಾಕಿ, ಕರ್ನಾಟಕದ ಹಾಲು ಉತ್ಪಾದನೆ ಮೂರು ಪಟ್ಟು ಅಭಿವೃದ್ಧಿ ಹೊಂದಿದೆ. ಕೇಳರದಲ್ಲಿ ಹಾಲಿನ ಉತ್ಪಾದನೆ ಕುಸಿತ ಕಾಣುತ್ತಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಒಟ್ನಲ್ಲಿ ನಂದಿನಿ ಬ್ರ್ಯಾಂಡ್ ಎಲ್ಲೆಲ್ಲೂ ಸದ್ದು ಮಾಡುತ್ತಿತ್ತು, ಆದರೆ ಇದೀಗ ಬೆಲೆ ಏರಿಕೆ ವಿಚಾರವಾಗಿ ಕೂಡ ಮುನ್ನೆಲೆಗೆ ಬರುವಂತಾಗಿದೆ. ಅಲ್ಲದೆ ರೈತರ ಹಿತಕ್ಕಾಗಿ ಹಾಲಿನ ಬೆಲೆ ಏರಿಕೆ ಅನಿವಾರ್ಯ ಎಂಬ ವಾದ ಮಂಡಿಸಲಾಗಿತ್ತು. ಹೀಗಾಗಿ ನಂದಿನಿ ಹಾಲಿನ ಬೆಲೆಯ ಮೇಲೆ 3 ರೂಪಾಯಿ ಹೆಚ್ಚಿಸಲಾಗಿದ್ದು, ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗುತ್ತೆ ಅಂತಾ ಕಾದು ನೋಡಬೇಕು. ಆದರೆ ರಾಜ್ಯ ಸರ್ಕಾರ ಮಾತ್ರ ಹೆಚ್ಚಳದ ಅಷ್ಟೂ ಹಣವನ್ನು ಈಗ ರೈತರಿಗೆ ನೀಡಲು ನಿರ್ಧರಿಸಿದೆ.