December 24, 2024

ಗುಂಡೂರಿ: ಸರಕಾರಿ ಜಾಗದಲ್ಲಿರುವ ಗೂಡಂಗಡಿ ತೆರವಿಗೆ ಭಾರೀ ಒತ್ತಡ ರಾಜಕೀಯ ದ್ವೇಷಕ್ಕೆ ಬಲಿಪಶು ಆಗುತ್ತಾ ಹರೀಶ್ ಕುಲಾಲ್‌ರ ಬಡ ಕುಟುಂಬ?

0

 

 

ಆರಂಬೋಡಿ, ಜು. 20: ರಸ್ತೆಬದಿ ನಿರ್ಮಿಸಿದ ಸಣ್ಣ ಗೂಡಂಗಡಿಯೊಂದು ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಅಧಿಕಾರಿಗಳ ದಂಡೇ ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಲು ಮೌಖಿಕವಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಇದು ಇಲ್ಲಿಯ ಸ್ಥಳೀಯ ರಾಜಕೀಯ ಕಾರ್ಯಕರ್ತನೊಬ್ಬನ ಪಿತೂರಿ ಅನ್ನುವ ಆರೋಪ ಕೇಳಿ ಬಂದಿದೆ.

ಏನಿದು ವಿದ್ಯಾಮಾನ?
ಗುಂಡೂರಿ ಗ್ರಾಮದ ತುಂಬೆದಲೆಕ್ಕಿ ನಿವಾಸಿ ಹರೀಶ್ ಕುಲಾಲ್ ಅವರು ಗುಂಡೂರಿ ಅಂಗನವಾಡಿ ಕೇಂದ್ರದ ಬಳಿಯಲ್ಲಿ ಸಣ್ಣದೊಂದು ಗೂಡಂಗಡಿಗೆ ಅನುಮತಿ ನೀಡಿ ಕಳೆದ ವಿಧಾನಸಭಾ ಚುನಾಚಣೆ ಮೊದಲು ಪರವಾನಿಗೆಗಾಗಿ ಆರಂಬೋಡಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರು. ಆದರೆ ಚುನಾವಣೆ ಪ್ರಕ್ರಿಯೆಗಳ ಸಮಯವಾದ್ದರಿಂದ ಪರವಾನಿಗೆ ನೀಡಿರಲಿಲ್ಲ. ಹರೀಶ್ ಕುಲಾಲ್‌ರವರು ಕಳೆದ ಜು. 9ರಂದು ಗುಂಡೂರಿಯಲ್ಲಿ ಗೂಡಂಗಡಿ ನಿರ್ಮಿಸಿ ಮತ್ತೆ ಗ್ರಾ.ಪಂ.ನಲ್ಲಿ ಪರವಾನಿಗೆ ನೀಡುವಂತೆ ಮೌಖಿಕವಾಗಿ ತಿಳಿಸಿದ್ದರು. ಈ ಸಂದರ್ಭ ಪರವಾನಿಗೆ ನೀಡಲು ನಿರಾಕರಿಸಿದ ಪಂಚಾಯತ್ ಅಧಿಕಾರಿಗಳು, ಸಾರ್ವಜನಿಕರ ದೂರು ಬಂದಿರುವುದಾಗಿ ತಿಳಿಸಿ ಸ್ಥಳಕ್ಕೆ ಬಂದು ಅಂಗಡಿಯನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.

ನನ್ನದು ತೀರಾ ಬಡ ಕುಟುಂಬ. ನಮಗೆ ಎರಡು ಹೆಣ್ಣು ಮಕ್ಕಳು ಇದ್ದಾರೆ. ದಯವಿಟ್ಟು ಬದುಕಲು ಅವಕಾಶ ಮಾಡಿಕೊಡಿ, ರಸ್ತೆ ಬದಿ ಅಗಲೀಕರಣದ ವೇಳೆ ಅಥವಾ ಅಗತ್ಯ ಬಿದ್ದಾಗ ತೆರವುಗೊಳಿಸುತ್ತೇನೆ ಎಂದು ಅವಲತ್ತುಕೊಂಡರೂ ಪಂಚಾಯತ್ ಸಮ್ಮತಿ ಸೂಚಿಸಿಲ್ಲ ಎನ್ನುತ್ತಾರೆ ಹರೀಶ್ ಕುಲಾಲ್.

ನಮ್ಮದು ಬಡ ಕುಟುಂಬ. ಅಟೋ ರಿಕ್ಷಾದಲ್ಲಿ ದುಡಿಯುತ್ತಿದ್ದೇನೆ. ಒಬ್ಬ ಸಾಮಾನ್ಯ ರಿಕ್ಷಾ ಚಾಲಕನಿಗೆ ಅದರಲ್ಲಿ ಬರುವ ಆದಾಯದಿಂದ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ. ಹೀಗಾಗಿ ಗುಂಡೂರಿ ಗ್ರಾಮದ ರಸ್ತೆ ಬದಿಯ ಸರಕಾರಿ ಜಾಗದಲ್ಲಿ ಸಣ್ಣದೊಂದು ಗೂಡಂಗಡಿ ನಿರ್ಮಿಸಿದ್ದೇನೆ. ಇದೀಗ ಕಂದಾಯ ಇಲಾಖೆಯ ಅಧಿಕಾರಿಗಳೂ ಆಗಮಿಸಿ ಅಂಗಡಿ ತೆರವುಗೊಳಿಸುವಂತೆ ಮೌಖಿಕವಾಗಿ ಆದೇಶಿಸಿದ್ದಾರೆ. ಅಲ್ಲದೆ ಜು. 19ರಂದು ನನ್ನ ಮನೆಗೆ ಬಂದ ಅಧಿಕಾರಿಗಳು ಒಂದು ತಿಂಗಳೊಳಗೆ ಅಂಗಡಿ ತೆರವು ಗೊಳಿಸಲು ನನ್ನಿಂದ ಸಹಿ ಪಡೆದು ತೆರಳಿದ್ದಾರೆ.

ನಾನು ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳನ್ನು ಮೊಬೈಲ್‌ನಲ್ಲಿ ಸ್ಟೇಟಸ್ ಹಾಕುತ್ತಿದ್ದೆ. ಅದಕ್ಕೆ ಇಲ್ಲಿಯ ಒಬ್ಬ ರಾಜಕೀಯ ಕಾರ್ಯಕರ್ತ ನನಗೆ ದೂರವಾಣಿ ಕರೆಮಾಡಿ ಸ್ಟೇಟಸ್ ಹಾಕುತ್ತಿರುವುದನ್ನು ಪ್ರಶ್ನಿಸಿ ಧಮ್ಕಿ ಹಾಕಿದ್ದ. ನಾನು ಅದಕ್ಕೆ ಸೊಪ್ಪು ಹಾಕಿಲ್ಲ. ಇದೀಗ ನಾನು ಸರಕಾರಿ ಜಾಗದಲ್ಲಿ ಅಂಗಡಿ ನಿರ್ಮಿಸಲು ಅದೇ ಕಾರಣಕ್ಕೆ ಆತ ಪಂಚಾಯತ್‌ಗೆ ದೂರು ನೀಡಿ ರಾಜಕೀಯವಾಗಿ ಅಧಿಕಾರಿಗಳಿಗೆ ಒತ್ತಡ ತಂದು ಈ ರೀತಿ ಬಡಪಾಯಿ ಕುಟುಂಬಕ್ಕೆ ಅನ್ಯಾಯ ಮಾಡುತ್ತಿದ್ದಾನೆ ಎಂದು ಅವರು ದೂರಿದ್ದಾರೆ.

ಅದೇನೇ ಇರಲಿ ಎರಡೂ ಕಡೆ ರಸ್ತೆಯ ಮಧ್ಯ ಭಾಗದಲ್ಲಿರುವ ತುಂಡು ಜಾಗದಲ್ಲಿ ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಬಡಪಾಯಿ ಕುಟುಂಬವೊಂದು ಸಣ್ಣದೊಂದು ತಾತ್ಕಾಲಿಕವಾಗಿ ಅಂಗಡಿಯಿಟ್ಟು ಜೀವನ ನಡೆಸಲು ಅಡ್ಡಿಪಡಿಸುತ್ತಿರುವ ಆ ರಾಜಕೀಯ ಕಿರಾತಕನಿಗೆ ದೇವರೇ ಬುದ್ದಿ ಕಲಿಸಲಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು