ಕೇಂದ್ರದ ೪ಜಿ ನ್ಯಾಚುರೇಷನ್ ಯೋಜನೆಯಡಿ ಗುಂಡೂರಿಯಲ್ಲಿ BSNL ಟವರ್ ನಿರ್ಮಾಣ. ಗಮನ ಸೆಳೆದಿದ್ದ ರೂರಲ್‌ನ್ಯೂಸ್‌ಎಕ್ಸ್‌ಪ್ರೆಸ್, ಮೆನ್ಯುವಲ್ ಸರ್ವೇ ಪೂರ್ಣ
ಆರಂಬೋಡಿ, ಜು. 19: ನೆಟ್‌ವರ್ಕ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಗುಂಡೂರಿಯ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಟವರ್ ನಿರ್ಮಾಣದ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ. ಗುಂಡೂರಿ ಗ್ರಾಮದ ಸುಮಾರು ೪೦ಕ್ಕೂ ಅಧಿಕ ಕುಟುಂಬಗಳು ನೆಟ್‌ವರ್ಕ್ ಇಲ್ಲದೆ ಸಮಸ್ಯೆ ಎದುರಿಸುವಂತಾಗಿತ್ತು. ಅಲ್ಲದೆ ಕೃಷಿಕೃಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಸೈಬರ್ ಸೆಂಟರ್‌ಗಳು ಕಾರ್ಯಚರಿಸುತ್ತಿವೆ. ಅಲ್ಲದೆ ಪಡಿತರ ವಿತರಣೆಗೂ ನೆಟ್‌ವರ್ಕ್ ಸಮಸ್ಯೆ ಬಹಳಷ್ಟು ತಲೆದೂರಿದೆ. ಈ ಎಲ್ಲಾ ಸಮಸ್ಯೆಗಳನ್ನು ರೂರಲ್‌ನ್ಯೂಸ್‌ಎಕ್ಸ್‌ಪ್ರೆಸ್ ಇತ್ತೀಚೆಗೆ ವರದಿ ಮಾಡಿ ಸಂಬಂಧಿತರ ಗಮನ ಸೆಳೆದಿತ್ತು. ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಇದೀಗ ಮೆನ್ಯುವಲ್ ಸರ್ವೇಕಾರ್ಯ ಕೂಡಾ ಪೂರ್ಣಗೊಂಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೇನು ಒಂದು ತಿಂಗಳೊಳಗೆ ಕಾಮಗಾರಿಗೆ ಚಾಲನೆ ದೊರೆಯಲಿದೆ.
ಏನಿದು 4ಜಿ ನ್ಯಾಚುರೇಷನ್ ಪ್ರೊಜೆಕ್ಟ್?
ಭಾರತ ಸರಕಾರದಿಂದ ಜಾರಿಗೊಳಿಸಿರುವ 4ಜಿ ನ್ಯಾಚುರೇಷನ್ ಪ್ರೊಜೆಕ್ಟ್ ಕಾರ್ಯಕ್ರಮದಲ್ಲಿ ದೂರಸಂಪರ್ಕ ಜಾಲವಿಲ್ಲದ ಗ್ರಾಮಗಳಿಗೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿರುತ್ತದೆ. ನೆಟ್‌ವರ್ಕ್ ಎನ್ನುವುದು ಸಾರ್ವಜನಿಕ ಮೂಲಭೂತ ಸೌಲಭ್ಯಗಳ ಒಂದಾಗಿದ್ದು, ರಾಜ್ಯ ಸರಕಾರದ ಸಹಕಾರ ಪಡೆದು ನೆಟ್‌ವರ್ಕ್ ಇಲ್ಲದ ಗ್ರಾಮಗಳಲ್ಲಿ ವ್ಯವಸ್ಥೆ ಕಲ್ಪಿಸಲು ಗ್ರೌಂಡ್ ಬೆಸ್ಟ್ ಸ್ಥಾವರಗಳ ಸ್ಥಾಪನೆಗೆ ಸ್ಥಳೀಯವಾಗಿ ಜಾಗ ಗುರುತಿಸಿ ನಿಯಮನುಸಾರ ಸರಕಾರಿ ಜಾಗ ಒದಗಿಸಿ ಟವರ್ ನಿರ್ಮಿಸುವ ಯೋಜನೆ ಇದಾಗಿದೆ. ಈಗಾಗಲೇ ದ.ಕ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣಕ್ಕೆ ಸರಕಾರಿ ಜಾಗವನ್ನು ಮಂಜೂರು ಮಾಡುವಂತೆ ಮಂಗಳೂರು ಬಿಎಸ್‌ಎನ್‌ಎಲ್‌ನ ಪ್ರಧಾನ ವ್ಯವಸ್ಥಾಪಕರು ದ.ಕ. ಜಿಲ್ಲಾಧಿಕಾರಿಗಳನ್ನು ಕೋರಿದ್ದು, ಅವರು ತಾಲೂಕು ತಹಶೀಲ್ದಾರರುಗಳಿಗೆ ಆದೇಶಿಸಿರುತ್ತಾರೆ. ಹೀಗಾಗಿ ಶೀಘ್ರದಲ್ಲೇ ಟವರ್ ನಿರ್ಮಾಣಕಾರ್ಯ ಆರಂಭವಾಗುವುದು ಪಕ್ಕಾ.