ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳಿಗೆ ಎರಡನೇ ಡೆಡ್ ಲೈನ್ ನೀಡಿದ ಎನ್ಐಎ
ಮಂಗಳೂರು, ಜುಲೈ 16: ರಾಜ್ಯವನ್ನೇ ತಲ್ಲಣಗೊಳಿಸಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ಚುರುಕುಕೊಳಿಸಿದೆ. ಪ್ರಕರಣದ ಪ್ರಮುಖ ಐವರು ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಆರೋಪಿಗಳಿಗೆ ಶರಣಾಗುವಂತೆ ಎರಡನೇ ಬಾರಿ ಡೆಡ್ ಲೈನ್ ನೀಡಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು ಆಗಸ್ಟ್ 18ರ ಒಳಗಾಗಿ ಶರಣಾಗುವಂತೆ ಎನ್ಐಎ ಡೆಡ್ ಲೈನ್ ವಿಧಿಸಿದೆ. ಎನ್ಐಎ ನ್ಯಾಯಾಲಯದ ಆದೇಶದಂತೆ ಎಚ್ಚರಿಕೆಯ ಸಂದೇಶ ನೀಡಿದ ಎನ್ಐಎ ಅಧಿಕಾರಿಗಳು ಆರೋಪಿಗಳ ಮನೆಗೆ ತೆರಳಿ ನೋಟಿಸ್ ಅಂಟಿಸಿದ್ದಾರೆ.
ಈ ಹಿಂದೆ ಜೂನ್ 30ರಂದು ಶರಣಾಗುವಂತೆ ಎನ್ಐಎ ಎಚ್ಚರಿಕೆ ನೀಡಿತ್ತು. ಆದರೆ ಎಚ್ಚರಿಕೆ ನೀಡಿದರೂ ಆರೋಪಿಗಳು ಮಾತ್ರ ಶರಣಾಗದೆ ತಲೆ ಮರೆಸಿಕೊಂಡಿದ್ದಾರೆ. ಎರಡನೇ ಡೆಡ್ ಲೈನ್ ಕುರಿತು ಸುಳ್ಯ ಹಾಗೂ ಕೊಡಗು ಭಾಗದಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಧ್ವನಿವರ್ಧಕ ಮೂಲಕ ಅಧಿಕಾರಿಗಳು ಘೋಷಣೆ ಹೊರಡಿಸಿದ್ದಾರೆ. ಆರೋಪಿಗಳು ಆಗಸ್ಟ್ 18ರೊಳಗೆ ಶರಣಾಗುವಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ.
ಈ ಬಾರಿಯೂ ಆರೋಪಿಗಳು ಶರಣಾಗದಿದ್ದರೆ ಆರೋಪಿಗಳ ಮನೆ, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ಎನ್ಐಎ ಅಧಿಕಾರಿಗಳು ನೀಡಿದ್ದಾರೆ. ಅಲ್ಲದೇ ಸಾರ್ವಜನಿಕರು ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಹ ಘೋಷಣೆ ಮಾಡಿದ್ದಾರೆ.