ಐತಿಹಾಸಿಕ ವೇಣೂರು ಮಹಾಮಸ್ತಕಾಭಿಷೇಕ ವೈಭವಕ್ಕೆ ದಿನಗಣನೆ ಶುರು ಜು.9ರಂದು ಕಾರ್ಯಾಲಯ ಉದ್ಘಾಟನೆ, ವೆಬ್‌ಸೈಟ್ ಅನಾವರಣ
ವೇಣೂರು, ಜು. 6: 2024ರ ಫೆಬ್ರವರಿಯಲ್ಲಿ ನಡೆಯಲಿರುವ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯ ಕಾರ್ಯಕ್ರಮಗಳಿಗೆ ಜು.9ರಿಂದ ಚಾಲನೆ ದೊರೆಯಲಿದ್ದು, ಲಕ್ಷಾಂತರ ಮಂದಿ ಸೇರುವ ಈ ಮಹಾಮಜ್ಜನ ವೈಭವಕ್ಕೆ ದಿನಗಣನೆ ಆರಂಭವಾಗಿದೆ.
ಜು. 9ರಂದು ಪೂರ್ವಾಹ್ನ 11-30ರಿಂದ ಕಾರ್ಯಾಲಯ ಮತ್ತು ಮಹಾಮಸ್ತಕಾಭಿಷೇಕದ ವೆಬ್‌ಸೈಟ್ ಅನಾವರಣಗೊಳ್ಳಲಿದೆ. ಮೂಡಬಿದಿರೆ ಶ್ರೀ ಜೈನ ಮಠದ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು ಪಾವನ ಸಾನಿಧ್ಯ ಮತ್ತು ಆಶೀರ್ವಚನ ನೀಡಲಿದ್ದಾರೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಮಹಾಮಸ್ತಕಾಭಿಷೇಕದ ವೆಬ್‌ಸೈಟನ್ನು ಅನಾವರಣಗೊಳಿಸಲಿದ್ದಾರೆ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಪ್ರ. ಕಾರ್ಯದರ್ಶಿ ವಿ. ಪ್ರವೀಣ್‌ಕುಮಾರ್ ಇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.