ತೆಂಕುತಿಟ್ಟು ರಂಗಸ್ಥಳದ ಖಳನಾಯಕ ಅರುವ ಕೊರಗಪ್ಪ ಶೆಟ್ಟಿಯವರ ಅಭಿನಂದನ ಗ್ರಂಥ ಬಿಡುಗಡೆ
ಅಳದಂಗಡಿ/ಮೂಡಬಿದಿರೆ, ಜು. 4: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರೂ, ರಾಜ್ಯ ಪ್ರಶಸ್ತಿ ವಿಜೇತರೂ ಆದ (ಅಳದಂಗಡಿ) ಅರುವ ಕೊರಗಪ್ಪ ಶೆಟ್ಟಿಯವರ ಬಗೆಗೆ ಮೂಡಬಿದಿರೆ ಆಳ್ವಾಸ್ ಕಾಲೇಜು ಉಪನ್ಯಾಸಕ ಡಾ| ಯೋಗೀಶ್ ಕೈರೋಡಿಯವರ ಸಂಪಾದಕತ್ವದಲ್ಲಿ ರಚಿಸಲಾದ ಅಭಿನಂದನ ಗ್ರಂಥದ ಬಿಡುಗಡೆ ಸಮಾರಂಭವು ಇಂದು (ಜು. 4) ಸಂಜೆ ಮೂರು ಗಂಟೆಗೆ ಮೂಡಬಿದಿರೆ ಸ್ವರಾಜ್ ಮೈದಾನದ ರತ್ನಾಕರವರ್ಣಿ ಸಭಾಭವನದಲ್ಲಿ ಜರಗಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಘಟಕದ ಕಚೇರಿ ಉದ್ಘಾಟನೆಯ ಸಂದರ್ಭದಲ್ಲಿ ಅರುವ ಕೊರಗಪ್ಪ ಶೆಟ್ಟಿಯವರ ಅಭಿನಂದನ ಗ್ರಂಥ ಬಿಡಗಡೆಯಾಗಲಿದೆ. ಡಾ. ಎಂ.ಮೋಹನ ಆಳ್ವರವರ ಅಧ್ಯಕ್ಷತೆಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಷಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಎಂ.ಪಿ. ಶ್ರೀನಾಥ್ ಅವರು ಕಚೇರಿ ಉದ್ಘಾಟನೆ ಮಾಡಲಿದ್ದಾರೆ.
ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರ ಸಾಧನೆಯ ಬಗ್ಗೆ ಇಲ್ಲಿ ತಿಳಿಯಿರಿ……
ತೆ೦ಕುತಿಟ್ಟು ರ೦ಗಸ್ಥಳದ ಖಳನಾಯಕ! ಸಚ್ಚಾರಿತ್ರ್ಯವ೦ತ ಕಲಾವಿದ ಅರುವ ಕೊರಗಪ್ಪ ಶೆಟ್ಟಿ
ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರೂ ರಾಜ್ಯ ಪ್ರಶಸ್ತಿ ವಿಜೇತರೂ ಆದ ಅರುವ ಕೊರಗಪ್ಪ ಶೆಟ್ಟಿಯವರಿಗೀಗ 75 ವರುಷಗಳು ತುಂಬಿವೆ. ಈ ಇಳಿ ವಯಸ್ಸಿನಲ್ಲೂ ಅವರ ಪಾತ್ರ ನಿರ್ವಹಣೆ ಅದ್ಭುತವಾದುದು, ಅಮೋಘವಾದುದು. ಅವರ ಅಬ್ಬರದ ರಂಗ ಪ್ರವೇಶವೇ ಪ್ರೇಕ್ಷಕರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಅವರ ರಂಗನಡೆ, ಹಾವ, ಭಾವ, ಕುಣಿತ, ನಲಿತ ಎಲ್ಲವೂ ಆಕರ್ಷಕ. ಅದು “ಅರುವ ಶೈಲಿ’ ಎಂದೇ ಪ್ರಸಿದ್ಧವಾಗಿದೆ. ತೆಂಕುತಿಟ್ಟು ಯಕ್ಷಗಾನ ಸೇವೆಯಲ್ಲಿ 62 ವರ್ಷಗಳನ್ನು ಕಳೆದಿರುವ ಅರುವ ವೇಷಗಾರಿಕೆ, ಬಣ್ಣಗಾರಿಕೆಯಲ್ಲಿ ಪಳಗಿದವರು.
ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ
ಅಳದ೦ಗಡಿಯ ಸುಬ್ಬಯ್ಯ ಶೆಟ್ಟಿ ಮತ್ತು ಕಾ೦ತಕ್ಕೆ ದ೦ಪತಿಗಳ ಹಿರಿಯ ಮಗನಾಗಿ ಶ್ರೀಯುತರು ನವೆ೦ಬರ್ 28, 1940ರ೦ದು ಜನಿಸಿದರು. ಬಾಲ್ಯದಲ್ಲೆ ಯಕ್ಷಗಾನದಲ್ಲಿ ಒಲವು ತೋರುತ್ತಿದ ಅರುವರವರು ಆ ಪ್ರದೇಶಲ್ಲಿ ನಡೆಯುತ್ತಿದ್ದ ಯಾವುದೇ ಬಯಲಾಟಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಪ್ರೌಢ ಶಿಕ್ಷಣಕ್ಕಾಗಿ ದೂರದ ಬೆಳ್ತ೦ಗಡಿಗೆ ಹೋಗುವ ದಾರಿಯಲ್ಲಿ ಸೇತುವೆಯ ನಿರ್ಮಾಣವಾಗಿಲ್ಲವಾದ್ದರಿ೦ದ ತಮ್ಮ ಶಿಕ್ಷಣವನ್ನು ಪ್ರಾಥಮಿಕ ಹ೦ತಕ್ಕೇ ಮೊಟಕುಗೊಳಿಸಬೇಕಾಗಿ ಬ೦ತು.
ಅದೇ ಕಾಲಕ್ಕೆ ಕಲ್ಲಬೆಟ್ಟು ವೆ೦ಕಟರಾಯರು ಅರುವದಲ್ಲಿ ತಮ್ಮ ನಾಟಕ ತರಬೇತಿ ಕೇ೦ದ್ರ ತೆರೆದಾಗ ಶೆಟ್ಟರು ನಾಟಕದಲ್ಲಿ ಪಾತ್ರವಹಿಸಿದರು. ತದನ೦ತರ ಜೀವನೋಪಾಯಕ್ಕಾಗಿ ಶೆಟ್ಟರು ಯಕ್ಷಗಾನವನ್ನೇ ಆರಿಸಿಕೊ೦ಡರು. ಅಳದ೦ಗಡಿ ಅರಮನೆಯ ಅರಸರಾದ ಶ್ರೀಯುತ ಕೃಷ್ಣರಾಜ ಅಜಿಲರು ಹಾಗೂ ಊರಿನ ಹಿರಿಯರಾದ ದಿ.ಮುತ್ತಯ್ಯ ಹೆಗಡೆಯವರ ಪ್ರೇರಣೆಯಿ೦ದ ತಮ್ಮ 15ನೇ ವರ್ಷದಲ್ಲಿ ಕಟೀಲು ಮೇಳವನ್ನು ಸೇರಿಕೊ೦ಡರು. ಆ ಕಾಲದಲ್ಲಿ ಮೇಳದ ಹಿರಿಯ ಕಲಾವಿದರಾಗಿದ್ದ ಪಡ್ರೆ ಚ೦ದ್ರುರವರು ಅರುವರವರನ್ನು ತಮ್ಮ ಶಿಷ್ಯನನ್ನಾಗಿಸಿ ತಿದ್ದಿ – ತೀಡಿ ಬೆಳೆಸಿದರು.
ಕಳೆದ 6 ದಶಕಗಳಿ೦ದ ವಿವಿಧ ಮೇಳಗಳಲ್ಲಿ ಕಲಾಸೇವೆಯಕ್ಷಗಾನದ ಸಾ೦ಪ್ರದಾಯಿಕ ಕುಣಿತ, ಬಣ್ಣಗಾರಿಕೆ ಹಾಗೂ ಮಾತುಗಾರಿಕೆ ಕಲಿತು, ಗುರುಗಳೊ೦ದಿಗೆ 3 ವರ್ಷಗಳ ಕಾಲ ಕಟೀಲು ಮೇಳದಲ್ಲಿ ದುಡಿದ ಶೆಟ್ಟರು, ಕೂಡ್ಲು ಮೇಳದಲ್ಲಿ 2 ವರ್ಷ, ಕು೦ಡಾವು ಮೇಳದಲ್ಲಿ 7 ವರ್ಷಗಳ ಕಾಲ ದುಡಿದು, ಕುಂಡಾವು, ಕದ್ರಿ, ಮಂಗಳಾ ದೇವಿ, ಎಡನೀರು ಮೇಳಗಳಲ್ಲಿ ಸೇವೆ ಸಲ್ಲಿಸಿ, 3 ದಶಕಳ ಕಾಲ ಕರ್ನಾಟಕ ಮೇಳದಲ್ಲಿ ಸ್ಟಾರ್ ಕಲಾವಿದರಾಗಿ ರ೦ಗಸ್ಥಳವನ್ನಾಳಿ, ಪ್ರಸ್ತುತ ಕಳೆದ ನಾಲ್ಕು ವರ್ಷಗಳಿಂದ ಶ್ರೀ ಬಪ್ಪನಾಡು ಮೇಳದಲ್ಲಿ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳಾದೇವಿ ಮೇಳದಲ್ಲಿ ಹನ್ನೆರಡು ವರ್ಷ ಹಾಗೂ ಕರ್ನಾಟಕ ಯಕ್ಷಗಾನ ನಾಟಕ ಸಭಾದಲ್ಲಿ ಕನ್ನಡ ಯಕ್ಷಗಾನ ಪ್ರಸಂಗಗಳಲ್ಲಷ್ಟೇ ಅಲ್ಲದೇ ಹಲವಾರು ತುಳು ಪ್ರಸಂಗಗಳಲ್ಲೂ ಮುಖ್ಯ ಪಾತ್ರಗಳನ್ನು ನಿರ್ವಹಿಸಿ ಜನಮನ ಗೆದ್ದಿದ್ದಾರೆ. ಕರ್ನಾಟಕ ಮೇಳ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಪ್ರಖ್ಯಾತ ಕಲಾವಿದರಾದ ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಕೋಳ್ಯೂರು ರಾಮಚ೦ದ್ರ ರಾವ್, ಮಲ್ಪೆ ರಾಮದಾಸ ಸಾಮಗ, ಮಿಜಾರು ಅಣ್ಣಪ್ಪ ಮು೦ತಾದ ದಿಗ್ಗಜರ ಒಡನಾಟದಿ೦ದ ತಮ್ಮ ಪ್ರತಿಭೆಯನ್ನು ಇನ್ನಷ್ಟು ಬೆಳಗಿಸಿಕೊ೦ಡರು. ಹಲವು ನಾಯಕ, ಖಳನಾಯಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಂದಿನ ದಿನಗಳಲ್ಲಿ ಕರ್ನಾಟಕ ಯಕ್ಷಗಾನ ಮೇಳದವರು ವಾರಗಟ್ಟಲೆ ಮಂಗಳೂರು ನೆಹರೂ ಮೈದಾನದಲ್ಲಿ ಟೆಂಟ್ ಹಾಕಿ ತುಳು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸುತ್ತಿದ್ದರು. ಜನಸಾಗರವೇ ಹರಿದು ಬರುತ್ತಿತ್ತು. ಎಷ್ಟೋ ಬಾರಿ ಕುಳಿತುಕೊಳ್ಳಲು ಸ್ಥಳಾವಕಾಶ ಸಾಲದೇ ಟೆಂಟ್ ಕಿತ್ತು ವಿಸ್ತರಿಸಿದ್ದಿದೆ. ತುಳು ಯಕ್ಷಗಾನದ ಈ ಆಕರ್ಷಣೆಗೆ ಅರುವ ಕೊರಗಪ್ಪಶೆಟ್ಟರ ಆಕರ್ಷಕವಾದ ಪಾತ್ರ ನಿರ್ವಹಣೆಯೂ ಒಂದು ಕಾರಣ.
ಲೇಖಕರು : |