ಆರಂಬೋಡಿ: ಬಯಲು ಮುಕ್ತ ಗ್ರಾಮದಲ್ಲಿ ಶೌಚಾಯಲವೇ ಇಲ್ಲವಂತೆ! ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾದ ದಾನಿಯ ಶೌಚಾಲಯ ಕೊಡುಗೆ
ಆರಂಬೋಡಿ, ಜು. 3: ಶೌಚಾಲಯವಿಲ್ಲದೆ ದಿನದೂಡುತ್ತಿದ್ದ ಕುಟುಂಬವೊಂದಕ್ಕೆ ದಾನಿಯೊಬ್ಬರು ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿದ್ದು, ಪಂಚಾಯತ್ ಮಾಡುವ ಕೆಲಸವನ್ನು ದಾನಿ ಮಾಡಿದ್ದಾರೆ ಅನ್ನುವ ವಿಚಾರದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಗಾಂದ್ಯೊಟ್ಟದ ಕುಟುಂಬವೊಂದಕ್ಕೆ ದಾನಿಯೊಬ್ಬರು ರೂ. 50 ಸಾವಿರ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿದ್ದರು. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಪಂಚಾಯತು ಮಾಡುವ ಕೆಲಸವನ್ನು ದಾನಿ ಮಾಡುತ್ತಿದ್ದಾರೆ ಅನ್ನುವ ರೀತಿಯಲ್ಲಿ ಕೆಲ ಬಿಜೆಪಿಯ ಸಕ್ರೀಯ ಕಾರ್ಯಕರ್ತರೇ ಪೋಸ್ಟ್ ಮಾಡಿದ್ದರು. ಇದು ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ವಿಚಾರ ತಿಳಿದು ಭಾರೀ ಚರ್ಚೆಗೆ ಎಡೆಮಾಡಿದೆ. ಈ ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಲು ಊರವರು ಹಣ ಸಂಗ್ರಹಿಸಿ ನೀಡಲು ಯೋಜನೆ ರೂಪಿಸಿದ್ದರು ಅನ್ನುವ ವಿಚಾರವೂ ಬಹಿರಂಗಗೊಂಡಿದೆ. ಒಟ್ಟಿನಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಇರುವ ಪಂಚಾಯತ್‌ನಲ್ಲೇ ಅದೇ ಪಕ್ಷದ ಕಾರ್ಯಕರ್ತ ಮಾಡುವ ಕಾರ್ಯ ಇದೀಗ ವಿವಾದಕ್ಕೆ ಕಾರಣವಾಗಿರುವುದು ವಿಶೇಷ!