January 11, 2025

Bajrang Dal Controversy: ಈಗ ಬಿಜೆಪಿಗರ ಕೈನಲ್ಲಿದೆ ಜೈಭಜರಂಗಬಲಿ ಅಸ್ತ್ರ, ಕಾಂಗ್ರೆಸ್‌ಗೆ ಆಪತ್ತು?

0

ಬೆಂಗಳೂರು, ಮೇ, 07: ಕಳೆದ ಒಂದೆರಡು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಲೇ ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಹುಟ್ಟು ಹಾಕಿದ್ದ ಕಾಂಗ್ರೆಸ್ ಕಳೆದ ಕೆಲವು ದಿನಗಳ ತನಕವೂ ರಾಜ್ಯದಲ್ಲಿ ನಂ 1 ಸ್ಥಾನದಲ್ಲಿತ್ತು. ಅಲ್ಲದೆ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರ ಹಿಡಿಯುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಕೆಲವೇ ದಿನಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಸಮೀಕ್ಷೆಗಳ ಪ್ರಕಾರ ಬಿಜೆಪಿ ಮುನ್ನಲೆಗೆ ಬಂದಿದೆ.

ಇಂತಹದೊಂದು ಬೆಳವಣಿಗೆಯ ಹಿಂದೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರ ಎಂಟ್ರಿ ಮಾತ್ರವಲ್ಲದೆ, ಸ್ವತಃ ಕಾಂಗ್ರೆಸ್‌ನವರೇ ಕೆಲವೊಂದು ಅಸ್ತ್ರಗಳನ್ನು ಬಿಜೆಪಿಗರಿಗೆ ನೀಡಿದ್ದಾರೆ. ಇದನ್ನೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸಮರ್ಥವಾಗಿ ಬಳಸಿಕೊಳ್ಳುತ್ತಿರುವುದು ಬಿಜೆಪಿ ಪರ ಅಲೆ ಸೃಷ್ಟಿಯಾಗಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಚುನಾವಣೆ ಸಮಯದಲ್ಲಿ ಚಿಕ್ಕ ಚಿಕ್ಕ ವಿಚಾರಗಳು ದೊಡ್ಡದಾದ ಬದಲಾವಣೆಗೆ ಕಾರಣವಾಗುತ್ತವೆ ಎನ್ನುವುದು ಗೊತ್ತಿರುವ ವಿಚಾರವೇ ಆಗಿದೆ. ಅದರಲ್ಲೂ ಬಿಜೆಪಿಗರ ಕೈಗೆ ಜಾತಿ, ಧರ್ಮದ ವಿಚಾರಗಳು ಸಿಕ್ಕರೆ ಅದನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಎಂಬುದು ಸ್ವತಃ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ.

2018ರಲ್ಲಿ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಂಬಿಸುವ ಮೂಲಕವೇ ಅಧಿಕಾರದಲ್ಲಿದ್ದ ಕಾಂಗ್ರೆಸ್ ಬಹುಮತ ಪಡೆಯದಂತೆ ಮಾಡಲಾಗಿತ್ತು. ಹೀಗಿದ್ದರೂ ಕಾಂಗ್ರೆಸ್ ಕಳೆದೆರಡು ವರ್ಷಗಳಿಂದ ಬಿಜೆಪಿ ಸರ್ಕಾರದ ವಿರುದ್ಧ ಸೃಷ್ಟಿ ಮಾಡಿದ್ದ ಆಡಳಿತ ವಿರೋಧಿ ಅಲೆ ಚುನಾವಣೆ ಸಮೀಪಿಸುವಾಗಲೇ ಎಲ್ಲೋ ಒಂದು ಕಡೆ ಕೊಚ್ಚಿ ಹೋಯಿತಾ? ಎನ್ನುವ ಅನುಮಾನಗಳು ಹುಟ್ಟಿಕೊಳ್ಳಲು ಶುರುವಾಗಿದೆ. 

ರಾಜ್ಯದಲ್ಲೀಗ ಜೈಭಜರಂಗಬಲಿ ಟ್ರೆಂಡ್ 

ಇಷ್ಟೆಲ್ಲ ಆಗಿರುವುದಕ್ಕೆ ಕಾರಣವಾಗಿರುವುದು ರಾಜ್ಯಕ್ಕೆ ಮೋದಿ ಎಂಟ್ರಿ ಎಂದರೆ ತಪ್ಪಾಗಲಾರದು. ಮತ್ತು ಅದೇ ವೇಳೆಗೆ ಕಾಂಗ್ರೆಸ್ಸಿಗರು ಬಿಡುಗಡೆ ಮಾಡಿದ ಭಜರಂಗದಳ ನಿಷೇಧದ ಪ್ರಣಾಳಿಕೆ ಮತ್ತು ಅದನ್ನು ಮೋದಿಯವರು ಪ್ರಚಾರಕ್ಕೆ ಬಳಸಿಕೊಂಡಿರುವ ರೀತಿಯೂ ಅದ್ಭುತವಾಗಿದೆ. ಇದೀಗ ರಾಜ್ಯದಲ್ಲಿ ಜೈಭಜರಂಗಬಲಿ ಟ್ರೆಂಡ್ ಶುರುವಾಗಿದೆ. ಸಾಮಾಜಿಕ ಜಾಲ ತಾಣಗಳು ಸೇರಿದಂತೆ ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಜೈಭಜರಂಗಬಲಿ ಘೋಷಣೆಯೊಂದಿಗೆ ಕಾರ್ಯಕ್ರಮ ಶುರುವಾಗುತ್ತಿದೆ.

ಇದರ ನಡುವೆ ಹಿಂದೂಪರ ಸಂಘಟನೆಗಳು ಕೂಡ ಹೋರಾಟಗಳನ್ನು ನಡೆಸುತ್ತಿವೆ. ಇಷ್ಟೆಲ್ಲ ಬೆಳವಣಿಗೆಗಳು ಕೆಲವೇ ಕೆಲವು ದಿನಗಳಲ್ಲಿ ಆಗಿದ್ದು. ಮತ್ತೊಂದೆಡೆ ಕೆಲವು ದಿನಗಳ ಹಿಂದೆ ನಡೆದಂತಹ ಸಮೀಕ್ಷೆಗಳು ಕಾಂಗ್ರೆಸ್ಸಿಗರಲ್ಲಿ ಆಶಾ ಭಾವನೆಯನ್ನು ಹುಟ್ಟುಹಾಕಿದ್ದವು. ನಾವೇ ಅಧಿಕಾರ ಹಿಡಿಯುತ್ತೇವೆ ಎಂಬ ಹುಮ್ಮಸ್ಸಿನಲ್ಲಿಯೇ ಕಾಂಗ್ರೆಸ್ಸಿಗರು ಕೆಲಸ ಮಾಡಿಕೊಂಡು ಬಂದಿದ್ದರು. ಇದೆಲ್ಲದರ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ “ಸಿಎಂ ಗದ್ದುಗೆ” ಕಚ್ಚಾಟಗಳು ಕೂಡ ಮುನ್ನಲೆಗೆ ಬಂದಿದ್ದವು. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅದನ್ನು ಬದಿಗೊತ್ತಿ ನಾಯಕರೆಲ್ಲರೂ ನಾವೆಲ್ಲರೂ ಒಂದೇ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸಿಕೊಡುವ ಪ್ರಯತ್ನ ಮಾಡಿದ್ದರು. ಅಲ್ಲದೆ ಅದರಲ್ಲಿ ಸಫಲರೂ ಆಗಿದ್ದರು. 

ಹಾಗೆ ನೋಡಿದರೆ ಕಳೆದೊಂದು ವರ್ಷದ ಹಿಂದೆಯೇ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದ ಕಾಂಗ್ರೆಸ್ ಪ್ರತಿ ಹೆಜ್ಜೆಗೂ ಅಡ್ಡಗಾಲಾಗಿ ಪರಿಣಮಿಸಿತ್ತು. ಅಷ್ಟೇ ಅಲ್ಲದೆ, ಸರ್ಕಾರದ ವಿರುದ್ಧ ಜನರಲ್ಲಿ ಅವಿಶ್ವಾಸ ಮೂಡಿಸಿ ಜನವಿರೋಧಿ ಧೋರಣೆ ಸೃಷ್ಟಿಸುವ ಉದ್ದೇಶವೂ ಫಲಪ್ರದವಾಗಿತ್ತು.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವ ಕೆಲಸಕ್ಕೂ ಮುಂದಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಟ್ಟಾಗಿ ಕಾಣಸಿಕೊಂಡು ಪಾದಯಾತ್ರೆ ನಡೆಸಿದರು. ಆ ಮೂಲಕ ಇದು ಪಕ್ಷಕ್ಕೆ ಶಕ್ತಿ ಜೊತೆಗೆ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವ ಕೆಲಸ ಮಾಡಿದರು. ಇದಾದ ಬಳಿಕ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾಂಗ್ರೆಸ್‌ಗೆ ಬೂಸ್ಟರ್ ಆಗಿತ್ತು. ಇದೇ ವೇಳೆಗೆ ಆಡಳಿತ ರೂಢ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್‌ಗೆ ಹತ್ತು ಹಲವು ಅಸ್ತ್ರಗಳು ಸಿಕ್ಕಿದ್ದವು. ಎಲ್ಲವನ್ನು ತುಂಬಾ ಜಾಣ್ಮೆಯಿಂದಲೇ ಕಾಂಗ್ರೆಸ್ ಬಳಸಿಕೊಂಡಿತ್ತು. ಅದು ಇತ್ತೀಚಿನ ತನಕವೂ ಬಿಜೆಪಿ ನಾಯಕರು ಕಂಗೆಡುವಂತೆ ಮಾಡಿತ್ತು. 

40% ಕಮಿಷನ್ ವಿಚಾರ ಪ್ರಬಲ ಅಸ್ತ್ರವಾಗಿತ್ತು. ಅದರ ಜೊತೆಗೆ ಕಾಂಗ್ರೆಸ್ ನೀಡಿದ ಗ್ಯಾರಂಟಿಯ ಕೊಡುಗೆಗಳು ಜನ ಅಚ್ಚರಿಯಿಂದ ನೋಡುವಂತೆ ಮಾಡಿತ್ತು. ಪರ್ಯಾಯ ಅಸ್ತ್ರ ‘ಕೈ’ ಬಳಿಯಿದೆಯಾ? ಇನ್ನು ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿಯಿರುವಾಗಲೇ ಕಾಂಗ್ರೆಸ್ ಹಲವು ಆಕರ್ಷಕ ಮತ್ತು ಮತದಾರರನ್ನು ಸೆಳೆಯುವಂತಹ ಯೋಜನೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹತ್ತು ಹಲವು ಯೋಜನೆಗಳನ್ನು ಪ್ರಸ್ತಾಪ ಮಾಡಿತ್ತು. ಆದರೆ ಆ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ವಿಚಾರದ ಪ್ರಸ್ತಾಪ ಎಲ್ಲೋ ಒಂದು ಕಡೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅದೊಂದೇ ವಿಚಾರ ಪ್ರಣಾಳಿಕೆಯಲ್ಲಿದ್ದ ಇತರೆ ವಿಚಾರಗಳನ್ನು ನಗಣ್ಯ ಮಾಡಿಬಿಟ್ಟಿತು. ಈಗಿನ ಸ್ಥಿತಿಯಲ್ಲಿ ಬಿಜೆಪಿಗರು ಜೈಭಜರಂಗಬಲಿ ಎನ್ನುತ್ತಾ ಮತದಾರರ ಬಳಿಗೆ ಹೋಗುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳು ಭಾರೀ ಮಹತ್ವ ಪಡೆದುಕೊಳ್ಳುತ್ತವೆ. ಹೀಗಿರುವಾಗ ಕಾಂಗ್ರೆಸ್ ನಾಯಕರು ಆಗಿರುವ ಡ್ಯಾಮೇಜ್ ಅನ್ನು ಯಾವ ರೀತಿಯಲ್ಲಿ ಕಂಟ್ರೋಲ್‌ ಮಾಡುತ್ತಾರೆ?, ಬಿಜೆಪಿಯ ಜೈಭಜರಂಗಬಲಿ ಅಸ್ತ್ರಕ್ಕೆ ಪರ್ಯಾಯ ಅಸ್ತ್ರ ಕಾಂಗ್ರೆಸ್ ಬಳಿಯಿದೆಯಾ? ಅನ್ನುವುದನ್ನು ಕಾದುನೋಡಬೇಕಿದೆ.

– oneindia

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು