ವೇಣೂರು: ಬಿಜೆಪಿಯಿಂದ ಬಹಿರಂಗ ಚುನಾವಣಾ ಪ್ರಚಾರಸಭೆ ರಾಜ್ಯದ ಮಾದರಿ ಶಾಸಕ ಹರೀಶ್ ಪೂಂಜರನ್ನು ಮತ್ತೊಮ್ಮೆ ಬಹುಮತದಿಂದ ಆರಿಸಿ: ಕೋಟ ಶ್ರೀನಿವಾಸ ಪೂಜಾರಿ
ವೇಣೂರು, ಮೇ 1: ಉತ್ತರ ಕನ್ನಡ, ಉಡುಪಿ, ದ.ಕ. ಜಿಲ್ಲೆಯ 19 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳ್ತಂಗಡಿ ಕ್ಷೇತ್ರದ ಜನತೆ ಮಾತ್ರ ಬದುಕು ಕಟ್ಟಿಕೊಂಡಿರುವುದನ್ನು ನಾನು ಗಮನಿಸಿದ್ದೇನೆ. ಹರೀಶ್ ಪೂಂಜರು ರಾಜ್ಯದ ಮುಖ್ಯಮಂತ್ರಿ, ಸಚಿವರುಗಳನ್ನು ಕಾಡಿ ಬೇಡಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ಮೊತ್ತದ ಅನುದಾನ ತಂದಿದ್ದಾರೆ. ರಾಜ್ಯದ 224 ಕ್ಷೇತ್ರದಲ್ಲಿ ನಿರ್ಮಾಣ ಆಗದಷ್ಟು ರಸ್ತೆ, ಶಾಲೆ, ಅಂಗನವಾಡಿ, ಆಸ್ಪತ್ರೆಗಳು ಇಲ್ಲಿ ಅಭಿವೃದ್ಧಿಯಾಗಿದ್ದಲ್ಲದೆ ಇಷ್ಟೊಂದು ಮೂಭೂತ ಸೌಲಭ್ಯವನ್ನು ಕಲ್ಪಿಸಿ ಮಾದರಿಯಾಗಿರುವ ಹರೀಶ್ ಪೂಂಜರನ್ನು ಮತ್ತೊಮ್ಮೆ ಬಹುಮತದಿಂದ ಆಯ್ಕೆ ಮಾಡಿ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿನಂತಿಸಿದರು.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಂಜೆ ವೇಣೂರು ಬಸ್ ತಂಗುದಾಣದ ಬಳಿ ಜರಗಿದ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು.
ಕೋಟಿ ಚೆನ್ನಯರ ಹೆಸರಿನಲ್ಲಿ ಸೈನಿಕ ಶಾಲೆಯನ್ನು ಪ್ರಥಮವಾಗಿ ಆರಂಭಿಸಿದ್ದು ಬಿಜೆಪಿ. ಹರೀಶ್ ಪೂಂಜರವರ ಒತ್ತಡದಂತೆ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ಬಿಜೆಪಿ. ಕಾಶ್ಮೀರದಲ್ಲಿ ತ್ರಿವರ್ಣಧ್ವಜ ಹಾರುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಸಮೃದ್ಧಶಕ್ತಿಶಾಲಿ ಭಾರತ ನಿರ್ಮಾಣವಾಗುತ್ತಿದೆ. ಮುಂದಿನ ವಿಶ್ವನಾಯಕ ಪ್ರಧಾನಿ ಮೋದಿಯನ್ನು ಎಲ್ಲಾ ದೇಶಗಳು ಒಪ್ಪಿಕೊಂಡಿವೆ. ಒಳಮೀಸಲಾತಿ ಹೆಚ್ಚಿಸಿದ ಬಿಜೆಪಿ ಬಡವರಿಗೂ ಸಮಾಜಮುಖ್ಯವಾಹಿನಿಗೆ ಬರಲು ಅನುಕೂಲವಾಗಿದೆ. ರಾಜ್ಯದಲ್ಲಿ ಬಿಎಸ್‌ವೈ ಸರಕಾರ ಬರುವವರೆಗೆ ಸರಕಾರಿ ನೌಕರರಿಗೆ ಬಿಟ್ಟರೆ ಬೇರೆ ಯಾರಿಗೂ ಪೆಂಕ್ಷನ್ ಯೋಜನೆ ಇರಲಿಲ್ಲ ಎಂದರು.
ತಾಕತ್ತಿದ್ದರೆ ಕಾಯ್ದೆಯನ್ನು ಒಪ್ಪಿಕೊಳ್ಳಿ
ಕಾಂಗ್ರೆಸ್ ನಾಯಕರಿಗೆ ಹಿಂದುಗಳ ಬಗ್ಗೆ ಗೌರವ, ವಿಶ್ವಾಸ ಇದ್ದರೆ ಬಿಜೆಪಿ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಒಪ್ಪಿಕೊಂಡು ಬಹಿರಂಗವಾಗಿ ಸಾರ್ವಜನಿಕ ಸಭೆಗಳಲ್ಲಿ ಹೇಳಿ ಎಂದು ಕೋಟ ಸವಾಲು ಹಾಕಿದರು.
೭೦ ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ಗೆ ಇಂದು ಗ್ಯಾರಂಟಿ ಕಾರ್ಡ್ ನೀಡುವ ದೌರ್ಭಾಗ್ಯ ಬಂದಿದೆ
೭೦ ವರ್ಷಗಳಲ್ಲಿ ದೇಶದಲ್ಲಿ ಆಡಳಿತ ನಡೆಸಿ ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ ಅದೆಷ್ಟೋ ಮುಖ್ಯಮಂತ್ರಿಗಳನ್ನು ನೀಡಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಇಂದು ಮನೆಮನೆ ತೆರಳಿ ಗ್ಯಾರಂಟಿ ಕಾರ್ಡ್ ಕೊಡುವ ದೌರ್ಬಾಗ್ಯ ಬಂದಿದೆ. ಪಕ್ಷದ ಮೇಲೆ ಜನತೆ ವಿಶ್ವಾಸ ಕಳೆದುಕೊಂಡಿರುವುದು ಅವರಿಗೆ ಖಾತ್ರಿಯಾಗಿದೆ. ಚೈನಾ ಸೆಟ್‌ಗೆ ಗ್ಯಾರಂಟಿ ಇಲ್ಲ, ವಾರಂಟಿಯೂ ಇಲ್ಲ. ಅದೇ ರೀತಿ ಕಾಂಗ್ರೆಸ್ ನೀಡುವ ಗ್ಯಾರಂಟಿಗೆ ವಾರಂಟಿ ಇಲ್ಲ ಎಂದು ಕೋಟ ಲೇವಡಿ ಮಾಡಿದರು.
ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲ ಕಾರ್ಯದರ್ಶಿ ಶ್ರೀನಿವಾಸ ರಾವ್, ಹಿರಿಯರಾದ ಕುಶಾಲಪ್ಪ ಗೌಡ, ದೇವೇಂದ್ರ ಗೌಡ, ಚುನಾವಣಾ ಪ್ರಭಾರಿ ಯತೀಶ್, ಭೂಅಭಿವೃದ್ಧಿ ಬ್ಯಾಂಕ್‌ನ ಸೋಮನಾಥ ಬಂಗೇರ, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯ ರಮೇಶ್, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅರುಣ್ ಕ್ರಾಸ್ತ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಕಾಮಿಡಿ ಕಿಲಾಡಿ ಖ್ಯಾತೀಯ ಹಿತೇಶ್ ಕಾಪಿನಡ್ಕ ಮತ್ತಿತರರು ನಾಯಕರು ಇದ್ದರು. ಹಲವು ಕಾರ್ಯಕರ್ತರು ಮಾತೃಪಕ್ಷಕ್ಕೆ ಸೇರ್ಪಡೆಗೊಂಡರು.
ನಾರಾವಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮೋಹನ ಅಂಡಿಂಜೆ ಸ್ವಾಗತಿಸಿ, ಉಮೇಶ್ ನಡ್ತಿಕಲ್ಲು ನಿರ್ವಹಿಸಿದರು.