ವೇಣೂರು ಚರ್ಚ್ ಬಳಿ ಅಪಾಯಕಾರಿ ಮರಗಳ ತೆರವಿಗೆ ಶೀಘ್ರ ಕ್ರಮ ವೇಣೂರು ವಲಯ ಅರಣ್ಯಾಧಿಕಾರಿ ಭರವಸೆ
ವೇಣೂರು, ಎ. 29: ವೇಣೂರು ಚರ್ಚ್ ಬಳಿಯ ಹೆದ್ದಾರಿಯಿಂದ ಸುಮಾರು 15 ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅನುಮತಿ ಬಂದಿದ್ದು, ಮಳೆಗಾಲದ ಮುಂಚೆ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ವೇಣೂರು ವಲಯ ಅರಣ್ಯಾಧಿಕಾರಿ ಮಹೀಮ್ ಎಂ. ಜನ್ನು ಅವರು ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ್ದಾರೆ.
ವೇಣೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯ ವೇಣೂರು ಚರ್ಚ್ ಬಳಿಯ ತಿರುವಿನಲ್ಲಿ ಸರಣಿ ರಸ್ತೆ ಅಪಘಾತಗಳು ನಡೆಯುತ್ತಲೇ ಇದ್ದು, ಇಂದು ಶನಿವಾರ ಸಂಜೆ ಕೂಡಾ ಈ ತಿರುವಿನಲ್ಲಿ ಟಿಪ್ಪರ್ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಜಖಂಗೊಂಡಿತ್ತು. ಈ ತಿರುವಿನಲ್ಲಿ ಅಪಾಯಕಾರಿ ಮರಗಳಿರುವ ಬಗ್ಗೆ ವೇಣೂರು ವಲಯ ಅರಣ್ಯಾಧಿಕಾರಿಯವರನ್ನು ಮಾತನಾಡಿಸಿದಾಗ ಮಳೆಗಾಲದ ಮುಂಚೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಕೊನೆಗೂ ಅಪಾಯಕಾರಿ ತಿರುವಿಗೆ ಮುಕ್ತಿ ದೊರೆಯಲಿದೆ.
ಅಪಾಯಕಾರಿ ತಿರುವು
ಇದೊಂದು ಅಪಾಯಕಾರಿ ತಿರುವು ಆಗಿದ್ದು, ಬಹಳ ಹಿಂದಿನಿಂದಲೂ ಇಲ್ಲಿ ಅಪಘಾತಗಳು ನಡೆಯುತ್ತಲೇ ಇವೆ. ಹೆದ್ದಾರಿ ಅಗಲೀಕರಣದ ವೇಳೆಯೂ ಈ ತಿರುವಿಗೆ ಮುಕ್ತಿ ದೊರೆತ್ತಿಲ್ಲ. ತಿರುವಿನಲ್ಲೇ ಅಡ್ಡವಾಗಿ ಎರಡು ಬೃಹತ್ ಮರಗಳಿದ್ದು, ಈ ಮರಗಳನ್ನು ತೆರವುಗೊಳಿಸಿ ಅಲ್ಪ ಪ್ರಮಾಣದಲ್ಲಾದರೂ ಹೆದ್ದಾರಿಯನ್ನು ನೇರವಾಗಿ ಮಾಡಿದರೆ ಸರಣಿ ಅಪಘಾತ ತಪ್ಪಿಸಬಹುದು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬರುತ್ತಿತ್ತು.