ಬೇಸಿಗೆಯಲ್ಲಿ ಆಗಾಗ ಮೂತ್ರ ಸೋಂಕು ಉಂಟಾಗುತ್ತಿದೆಯೇ? ತಡೆಗಟ್ಟುವುದು ಹೇಗೆ?
ಬೇಸಿಗೆಕಾಲದಲ್ಲಿ ಹೆಚ್ಚಿನವರಲ್ಲಿ ಕಂಡುಬರುವ ಸಮಸ್ಯೆ ಎಂದರೆ ಮೂತ್ರನಾಳದ ಸೋಂಕು, ಉರಿಮೂತ್ರ. ಬೇರೆ ಯಾವ ಸೀಸನ್‌ನಲ್ಲೂ ಕಾಡದ ಉರಿಮೂತ್ರ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದಕ್ಕೆ ಕಾರಣ ಒಣ ಹವೆ. ಇದು ಮೂತ್ರನಾಳದ ಸೋಂಕನ್ನು ಹೆಚ್ಚಿಸುತ್ತದೆ.
ಡಿಹೈಡ್ರೇಷನ್, ಬೆವರು ಒದ್ದೆಯಾದ ಬಟ್ಟೆಗಳು ಸೋಂಕಿ ಮೂತ್ರನಾಳದ ಸೋಂಕಿನ ಅಪಾಯ ಹೆಚ್ಚಿಸುತ್ತೆ. ಇದನ್ನು ತಡೆಗಟ್ಟಲು ಏನು ಮಾಡಬೇಕು, ಉರಿಮೂತ್ರ ಸಮಸ್ಯೆಗೆ ಪರಿಹಾರ ಏನು ಎನ್ನುವುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ ನೋಡಿ.
ಬೇಸಿಗೆಯಲ್ಲಿ ಉರಿಮೂತ್ರ ಸಮಸ್ಯೆ ತಡೆಗಟ್ಟಲು ಪರಿಹಾರಗಳು
ನಿಮಗೆ ಸಾಮಾನ್ಯವಾಗಿ ಉರಿಮೂತ್ರದ ಸಮಸ್ಯೆ ಕಾಡುತ್ತೆ ಎಂದಾದಲ್ಲಿ ಈ ಟಿಪ್ಸ್‌ಗಳನ್ನು ತಪ್ಪದೇ ಅಳವಡಿಸಿಕೊಳ್ಳಿ ಯಾಕೆಂದರೆ, ಸಮಸ್ಯೆ ಬರುವ ಮುನ್ನವೇ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಂಡಲ್ಲಿ ಸಮಸ್ಯೆ ಬಾರದಂತೆ ನೋಡಿಕೊಳ್ಳಬಹುದು. ಬೇಸಿಗೆಯಲ್ಲಿ ಉರಿಮೂತ್ರ ಸಮಸ್ಯೆ ಬರಬಾರದೆಂದರೆ ಈ ಪರಿಹಾರಗಳನ್ನು ಅಳವಡಿಸಿಕೊಳ್ಳಿ.
1. ಹೈಡ್ರೇಟ್ ಆಗಿರಿ
ಬೇಸಿಗೆಯಲ್ಲಿ ಮೂತ್ರನಾಳದ ಸೋಂಕನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ನೀವು ದಿನವಿಡೀ ಹೈಡ್ರೇಟ್ ಆಗಿರುವುದು. ವಿಶೇಷವಾಗಿ ನೀವು ಹೊರಗೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದರೆ ಹೆಚ್ಚಿದ ತಾಪಮಾನವು ದೇಹವು ಹೆಚ್ಚು ಬೆವರು ಮಾಡಲು ಕಾರಣವಾಗುತ್ತದೆ, ಅಂದರೆ ನಾವು ಸೇವಿಸುವ ಹೆಚ್ಚಿನ ನೀರನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ಸಾಧ್ಯವಾದಷ್ಟು ನೀರು ಕುಡಿಯುವುದು ಉತ್ತಮ. ಹೆಚ್ಚು ನೀರು ಕುಡಿದಷ್ಟು ಮೂತ್ರ ವಿಸರ್ಜನೆಗೂ ಹೋಗಬೇಕಾಗುತ್ತೆ ಎನ್ನಬೇಡಿ, ಹೆಚ್ಚು ಮೂತ್ರವಿಸರ್ಜನೆಯೂ ಒಳ್ಳೆಯದು. ಇದು ಮೂತ್ರನಾಳದಲ್ಲಿ ಸೋಂಕನ್ನು ಬೆಳೆಯಲು ಬಿಡುವುದಿಲ್ಲ. ಏಕೆಂದರೆ ಮೂತ್ರವಿಸರ್ಜನೆಯು ಅಪಾಯಕಾರಿ ಬ್ಯಾಕ್ಟೀರಿಯಾಗಳ ಕುರುಹನ್ನೂ ಸಹ ಹೊರಹಾಕುತ್ತದೆ.
ಮೂತ್ರದ ಬಣ್ಣವನ್ನು ಆಧರಿಸಿಯೂ ನಿವು ಹೈಡ್ರೇಟ್ ಆಗಿದ್ದೀರಾ ಎನ್ನುವುದನ್ನೂ ಗಮನಿಸಬಹುದು. ಹೇಗೆಂದರೆ ಹೈಡ್ರೇಟ್ ಆಗಿರುವವರಲ್ಲಿ ಮೂತ್ರದ ಬಣ್ಣ ತಿಳಿ ಹಳದಿಯಾಗಿರುತ್ತದೆ. ಡಿಹೈಡ್ರೇಟ್ ಆಗಿದ್ದವರಲ್ಲಿ ಮೂತ್ರದ ಬಣ್ಣ ಗಾಢ ಬಣ್ಣದಲ್ಲಿರುತ್ತದೆ. ಸಾಧ್ಯವಾದಷ್ಟು ದಿನಕ್ಕೆ ಎರಡೂವರೆ ಲೀಟರ್‌ನಷ್ಟು ನೀರು ಕುಡಿಯಲು ಪ್ರಯತ್ನಿಸಿ.
2. ತಂಪಾಗಿರಲು ಪ್ರಯತ್ನಿಸಿ
ಹೆಚ್ಚಿದ ತಾಪಮಾನವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ನೇರವಾಗಿ ಸಂಬಂಧಿಸಿರುವುದರಿಂದ, ದಿನವಿಡೀ ತಂಪಾಗಿರಲು ಪ್ರಯತ್ನಿಸಿ. ನೆರಳಿನಲ್ಲಿ ಇರಿ ಮತ್ತು ನೀವು ಹೊರಾಂಗಣ ಚಟುವಟಿಕೆಗಳನ್ನು ಮಾಡುವಾಗ ನೀವು ಹೆಚ್ಚು ಬಿಸಿಲಿಗೆ ಒಡ್ಡಿಕೊಳ್ಳಬೇಡಿ. ಹೊರಾಂಗಣ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ತಲುಪಿದಾಗ, ಮೂತ್ರದ ಸೋಂಕಿನ ಸಂಭವವು 15% ರಷ್ಟು ಹೆಚ್ಚಾಗುತ್ತದೆ. ಹಾಗಾಗಿ ಹೊರಗೆ ಹೋಗಲೇಬೇಕಾದ ಅವಶ್ಯಕತೆ ಇದ್ದರೆ ಮಾತ್ರವೇ ಹೋಗಿ. ಹೆಚ್ಚಿನ ತಾಪಮಾನದಲ್ಲಿ ನಿಮ್ಮನ್ನು ಅತಿಯಾಗಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಿ.
3. ಒಣಗಿದ ಬಟ್ಟೆ ಧರಿಸಿ
ತೇವಾಂಶವುಳ್ಳ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳು ಸಹ ಬೆಳೆಯುತ್ತವೆ. ಅನೇಕ ಜನರು ಬೇಸಿಗೆಯಲ್ಲಿ ಪೂಲ್, ಬೀಚ್ ಅಥವಾ ಸರೋವರಕ್ಕೆ ಹೋಗುತ್ತಾರೆ. ಈ ಕಾರಣದಿಂದಲೂ ಮೂತ್ರನಾಳದ ಸೋಂಕುಹೆಚ್ಚಾಗುತ್ತವೆ. ನೀವು ಇಡೀ ದಿನ ಈಜುಡುಗೆ ಧರಿಸುತ್ತಿದ್ದರೆ ಈ ಸಮಸ್ಯೆ ತಪ್ಪಿದ್ದಲ್ಲ. ಇದರ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲು, ಈಜಾಡಿದ ನಂತರ ಬಟ್ಟೆಗಳನ್ನು ಒಣಗಿಸಿ. ನೀರಲ್ಲಿ ಒದ್ದೆಯಾದ ಬಟ್ಟೆಗಳನ್ನು ಬೇಗನೆ ಬದಲಾಯಿಸಿ. ಹೊರಾಂಗಣದಲ್ಲಿ ವ್ಯಾಯಾಮ ಮಾಡುವವರಿಗೆ ಕೂಡಾ ಇದು ಅನ್ವಯಿಸುತ್ತದೆ. ನೀವು ವ್ಯಾಯಾಮ ಮುಗಿಸಿದ ನಂತರ ಸ್ನಾನ ಮಾಡಿ ಮತ್ತು ಒಣ ಬಟ್ಟೆಗಳನ್ನು ಹಾಕಿಕೊಳ್ಳಿ.
4. ಮೂತ್ರವಿಸರ್ಜನೆ ಕಂಟ್ರೋಲ್ ಮಾಡಿಕೊಳ್ಳಬೇಡಿ
ವಾಶ್‌ರೂಮ್‌ಗೆ ಹೋಗಬೇಕೆನಿಸಿದಾಗ ಹೋಗಿ ನಿಮ್ಮ ಮೂತ್ರಕೋಶವನ್ನು ಖಾಲಿ ಮಾಡುವುದು ಮುಖ್ಯ. ನೀವು ನಿಯಮಿತವಾಗಿ ನಿಮ್ಮ ಮೂತ್ರಕೋಶವನ್ನು ಖಾಲಿ ಮಾಡದಿದ್ದರೆ, ಬ್ಯಾಕ್ಟೀರಿಯಾವು ಪುನರಾವರ್ತನೆಯಾಗುವ ಮತ್ತು ಸೋಂಕನ್ನು ಉಂಟುಮಾಡುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತದೆ. ಬ್ಯಾಕ್ಟೀರಿಯಾಗಳು ನಿಮ್ಮ ಮೂತ್ರಕೋಶದಲ್ಲಿ ಅಭಿವೃದ್ಧಿಯಾಗಬಹುದು. ಇದು ಸೋಂಕು, ಉರಿಮೂತ್ರದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೆಚ್ಚು ಹೊತ್ತು ಮೂತ್ರವನ್ನು ಹಿಡಿದಿಟ್ಟುಕೊಳ್ಳಬೇಡಿ.
5. ಉತ್ತಮ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ
ಬೇಸಿಗೆಯಲ್ಲಿ ವೈಯಕ್ತಿಕ ನೈರ್ಮಲ್ಯಕ್ಕೆ ಆದ್ಯತೆ ನೀಡುವುದು ಮೂತ್ರನಾಳದ ಸೋಂಕನ್ನು ತಡೆಗಟ್ಟುವ ಕ್ರಮವಾಗಿದೆ. ಮಹಿಳೆಯರು ಮೂತ್ರವಿಸರ್ಜನೆ ಮಾಡಿದ ನಂತರ ಯಾವಾಗಲೂ ಮುಂಭಾಗದಿಂದ ಹಿಂದಕ್ಕೆ ಒರೆಸಿ. ಹೀಗೆ ಮಾಡುವುದರಿಂದ ಗುದದ್ವಾರದಿಂದ ಮೂತ್ರನಾಳಕ್ಕೆ ಬ್ಯಾಕ್ಟೀರಿಯಾ ವರ್ಗಾವಣೆಯಾಗುವುದನ್ನು ತಡೆಯುತ್ತದೆ. ಸಾಮಾನ್ಯವಾಗಿ ಮಹಿಳೆಯರೇ ಹೆಚ್ಚು ಮೂತ್ರನಾಳದ ಸೋಂಕಿಗೆ ಒಳಗಾಗುತ್ತಾರೆ, ಈ ಕ್ರಮವನ್ನು ಅನುಸರಿಸುವುದರಿಂದ ಸೋಂಕನ್ನು ತಡೆಗಟ್ಟಬಹುದು.
6 ಲೈಂಗಿಕತೆಯ ಮೊದಲು ಮತ್ತು ನಂತರ ಮೂತ್ರ ವಿಸರ್ಜನೆ ಮಾಡಿ
ಲೈಂಗಿಕ ಸಂಭೋಗದ ಸಮಯದಲ್ಲೂ ಬ್ಯಾಕ್ಟೀರಿಯಾವು ಸುಲಭವಾಗಿ ಹರಡುತ್ತದೆ. ಇದನ್ನು ತಪ್ಪಿಸಲು ಕಷ್ಟವಾಗಿದ್ದರೂ, ಲೈಂಗಿಕವಾಗಿ ಸೇರುವ ಮೊದಲು ಮತ್ತು ನಂತರ ಮೂತ್ರ ವಿಸರ್ಜಿಸುವ ಮೂಲಕ ನೀವು ಯಾವುದೇ ಹೆಚ್ಚಿನ ಸಮಸ್ಯೆಗಳನ್ನು ತಡೆಯಬಹುದು.
7. ಜನನ ನಿಯಂತ್ರಣ ವಿಧಾನಗಳನ್ನು ಬಳಸುವಾಗ ಎಚ್ಚರಿಕೆ ವಹಿಸಿ
ಕೆಲವು ವಿಧದ ಗರ್ಭನಿರೋಧಕಗಳನ್ನು ಬಳಸುವ ಮಹಿಳೆಯರು ಮೂತ್ರದ ಸೋಂಕಿನ ಬೆಳವಣಿಗೆಗೆ ಹೆಚ್ಚು ಒಳಗಾಗುತ್ತಾರೆ. ಡಯಾಫ್ರಾಮ್‌ಗಳು, ವೀರ್ಯನಾಶಕ-ಚಿಕಿತ್ಸಾ ಉತ್ಪನ್ನಗಳು ಮತ್ತು ಲೂಬ್ರಿಕೇಟೆಡ್ ಕಾಂಡೋಮ್‌ಗಳಿಂದಾಗಿಯೂ ಸೋಂಕು ಹರಡಬಹುದು. ಹೇಗೆಂದರೆ, ಈ ರೀತಿಯ ಜನನ ನಿಯಂತ್ರಣ ವಿಧಾನಗಳು ಹೆಚ್ಚು ಕಿರಿಕಿರಿಯನ್ನು ಉಂಟುಮಾಡುತ್ತವೆ, ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಸುಲಭಗೊಳಿಸುತ್ತದೆ. ಗರ್ಭನಿರೋಧಕಗಳ ಬಳಕೆಯಿಂದ ಉರಿಮೂತ್ರದ ಸಮಸ್ಯೆ ಅನುಭವಿಸುತ್ತಿದ್ದರೆ ತಜ್ಞ ವೈದ್ಯರೊಂದಿಗೆ ಮಾತನಾಡಿ.
8. ಹೆಚ್ಚು ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ
ಬಿಗಿಯಾದ ಬಟ್ಟೆ ಮತ್ತು ಈಜುಡುಗೆಗಳು ಜನನಾಂಗದ ಪ್ರದೇಶದಲ್ಲಿ ತೇವಾಂಶ ಮತ್ತು ಶಾಖವನ್ನು ಉಳಿಸಿಕೊಳ್ಳಬಹುದು, ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಅತಿಯಾದ ಬಿಗಿಯಾದ ಬಟ್ಟೆಗಳನ್ನು ತಪ್ಪಿಸಲು ಪ್ರಯತ್ನಿಸಿ, ವಿಶೇಷವಾಗಿ ನೀವು ಹೊರಗೆ ಹೋಗಬೇಕಾದಲ್ಲಿ ನಿಮ್ಮ ಸೊಂಟದ ಪ್ರದೇಶದ ಸುತ್ತಲೂ ಆರಾಮವಾಗಿ ಹೊಂದಿಕೊಳ್ಳುವ ಹಗುರವಾದ, ಕಾಟನ್ ಬಟ್ಟೆಗಳನ್ನು ಧರಿಸಿ.
ಬೇಸಿಗೆಯಲ್ಲಿ ಮೂತ್ರವಿಸರ್ಜಿಸುವಾಗ ಉರಿಯುತ್ತಿದ್ದರೆ, ನೋವು ಅಥವಾ ತುರಿಕೆಯಿದ್ದಲ್ಲಿ, ಮೂತ್ರವಿಸರ್ಜಿಸಿದ ನಂತರ ಕಿಬ್ಬೊಟ್ಟೆ ನೋವು ಕಂಡುಬಂದರೆ ಇದರ ಜೊತೆಗೆ ಚಳಿ, ಜ್ವರ, ನಿಶ್ಯಕ್ತಿ, ಬೆನ್ನುನೋವು ಇದ್ದರೂ ತಪ್ಪದೇ ವೈದ್ಯರನ್ನು ಭೇಟಿ ಮಾಡಿ. ಯಾಕೆಂದರೆ ಇದು ಮೂತ್ರನಾಳದ ಸೋಂಕಿನ ಲಕ್ಷಣವಾಗಿರುತ್ತದೆ. ಬೇಸಿಗೆಯಲ್ಲಿ ಉರಿಮೂತ್ರ ಸಮಸ್ಯೆ ಬರಬಾರದೆಂದರೆ ತಪ್ಪದೇ ಮೇಲೆ ತಿಳಿಸಿರುವ ಎಲ್ಲಾ ಅಂಶಗಳನ್ನು ಅಳವಡಿಸಿಕೊಳ್ಳಿ.
ಮಾಹಿತಿ ಕೃಪೆ: ಒನ್ ಇಂಡಿಯಾ