ನಾಳೆ ಕರಾವಳಿಯಲ್ಲಿ ಚುನಾವಣಾ ಚಾಣಕ್ಯ ಅಮಿತ್ ಶಾ ದಂಡಯಾತ್ರೆ: ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ವಿವರ
ಉಡುಪಿ, ಏಪ್ರಿಲ್ 28: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಡುಪಿಗೆ ಆಗಮಿಸಲಿದ್ದಾರೆ. ಜಿಲ್ಲೆಯ ಕಾಪು ಕ್ಷೇತ್ರದ ಕಟಪಾಡಿ ಮತ್ತು ಬೈಂದೂರು ಕ್ಷೇತ್ರದ ಸಿದ್ಧಾಪುರದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಚುನಾವಣೆ ನಿಗದಿಯಾಗಿ ಅಭ್ಯರ್ಥಿ ಪಟ್ಟಿ ಅಂತಿಮವಾದ ಬಳಿಕ ಮೊದಲ ಬಾರಿಗೆ ಶಾ ಉಡುಪಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಅಮಿತ್ ಶಾ ಆಗಮನದ ಮೂಲಕ ಮತ್ತಷ್ಟು ಮೈಲೇಜ್ ಪಡೆಯುವ ಆಲೋಚನೆಯಲ್ಲಿದೆ.
ಚುನಾವಣಾ ಘೋಷಣೆಯಾಗಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾದ ಬಳಿಕ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಡುಪಿಗೆ ನಾಳೆ ಭೇಟಿ ನೀಡಿಲಿದ್ದಾರೆ. ಮಧ್ಯಾಹ್ನ 2:20ರ ಸುಮಾರಿಗೆ ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮಿಸಲಿರುವ ಅಮಿತ್ ಶಾ, 2:30 ರಿಂದ 3:15 ರವರೆಗೆ ಕಟಪಾಡಿಯಲ್ಲಿ ಅಮಿತ್ ಶಾ ಸಾರ್ವಜನಿಕ ಸಭೆ ಭಾಗಿಯಾಗಲಿದ್ದಾರೆ.
ಕಾಪು ಕ್ಷೇತ್ರದ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಚುನಾವಣಾ ಪ್ರಚಾರ ಸಮಾವೇಶ ಆಯೋಜಿಸಲಾಗಿದ್ದು, ಉಡುಪಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಪರ ಅಮಿತ ಶಾ ಪ್ರಚಾರ ಮಾಡಲಿದ್ದಾರೆ. ಸಮಾವೇಶದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರ ಜೊತೆಗೆ ಜಿಲ್ಲಾ ಬಿಜೆಪಿ ಮುಖಂಡರು, ಹಿರಿಯ ನಾಯಕರು ಭಾಗಿಯಾಗಲಿದ್ದಾರೆ. ಕಟಪಾಡಿ ಸಭೆಯ ಬಳಿಕ ಅಮಿತ್ ಶಾ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ತೆರಳಲಿದ್ದಾರೆ.
ಮಧ್ಯಾಹ್ನ 3:30ಕ್ಕೆ ಹೆಲಿಕಾಪ್ಟರ್ ಬೈಂದೂರುಗೆ ಆಗಮಿಸಲಿರುವ ಅಮಿತ್ ಶಾ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರದಲ್ಲಿ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. 4 ಗಂಟೆಗೆ ರೋಡ್ ಶೋ ನಿಗದಿಯಾಗಿದ್ದು, ಬಳಿಕ ಸಿದ್ದಾಪುರ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ಧೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ. ಸಂಜೆ 4:15 ರಿಂದ 4:45 ರವರೆಗೆ ನಡೆಯುವ ಬಹಿರಂಗ ಸಭೆ ಮೂಲಕ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಪರ ಅಮಿತ್ ಶಾ ಪ್ರಚಾರ ಮಾಡಲಿದ್ದಾರೆ. ಬಳಿಕ ಸಂಜೆ 4:55 ಕ್ಕೆ ಹೆಲಿಕಾಪ್ಟರ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಲಿದ್ದಾರೆ.
– oneindia