ಮಂಗಳೂರಿನಲ್ಲಿ ಇಂದು ಸಂಜೆ ರಾಹುಲ್ ಗಾಂಧಿ ಪ್ರಚಾರದ ಕಳೆ: ರಾಗಾ ರೋಡ್ ಶೋಗೆ ಭರ್ಜರಿ ಸಿದ್ಧತೆ
ರಾಜ್ಯ ಚುನಾವಣಾ ರಣಕಣ ರಂಗೇರುತ್ತಿದ್ದಂತೆ ಕೇಂದ್ರ ನಾಯಕರ ವಾಹನಗಳ ಸದ್ದು ಹೆಚ್ಚಾಗಿ ಕೇಳಿ ಬರುತ್ತಿದೆ. ಈ ಬಾರಿ ಗೆಲುವು ಸಾಧಿಸಲು ತೊಡೆತಟ್ಟಿ ನಿಂತಿರುವ ಕಾಂಗ್ರೆಸ್ ಕೇಂದ್ರ ನಾಯಕರನ್ನು ರಾಜ್ಯಕ್ಕೆ ಕರೆಸಿದೆ. ಬುಧವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಪ್ರಚಾರ ಮಾಡಿದರು. ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ಮಾಡಲಿದ್ದಾರೆ.
ಉಡುಪಿಯ ಕಾಪುವಿನ ಮೀನುಗಾರರೊಂದಿಗೆ ಮಧ್ಯಾಹ್ನ 3.50ಕ್ಕೆ ಸಂವಾದ ನಡೆಸಲಿದ್ದಾರೆ. ಮಂಗಳೂರಿನಲ್ಲಿ ಇಂದು ಸಂಜೆ 5.30ಕ್ಕೆ ರಾಹುಲ್ ಗಾಂಧಿ ಪ್ರಚಾರ ಮಾಡಲಿದ್ದಾರೆ. ನಗರದ ಕಲೆಕ್ಟರ್ಸ್ ಗೇಟ್ ನಿಂದ ನೆಹರೂ ಮೈದಾನದವರೆಗೆ ಸುಮಾರು ಎರಡು ಕಿಮೀ ರೋಡ್ ಶೋ ನಡೆಸಲಿದ್ದಾರೆ. ಅದ್ದೂರಿ ರೋಡ್ ಶೋ ನಡೆಯಲಿದ್ದು ದಕ ಜಿಲ್ಲೆಯ ಎಲ್ಲ ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಬೇಕಾದ ಸಿದ್ದತೆಗಳು ಈಗಾಗಲೇ ಮಾಡಿಕೊಳ್ಳಲಾಗಿದೆ.
ಸಂಜೆ 5ಗಂಟೆಗೆ ಅಡ್ಯಾರ್‌ನಲ್ಲಿ ಪ್ರಚಾರದ ಸಭೆ ನಡೆಸಲಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಮಂಗಳೂರು ನಗರದ ಬಲ್ಮಠ, ಕಲೆಕ್ಟರ್ ಗೇಟ್ ನಡುವೆ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ನಗರ ಮಧ್ಯೆ ರೋಡ್ ಶೋ ನಡೆಸುವುದಕ್ಕೆ ಅವಕಾಶ ಸಿಗದ ಕಾರಣ ಮಂಗಳೂರು ನಗರ ಹೊರವಲಯದ ಅಡ್ಯಾರ್ ನಲ್ಲಿರುವ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಪ್ರಚಾರ ಸಭೆ ಏರ್ಪಡಿಸಲಾಗಿದೆ. ಪ್ರಚಾರ ಸಭೆ ನಡೆಯೋದಕ್ಕೂ ಮುನ್ನ ಅಡ್ಯಾರ್‌ನಲ್ಲಿ ಹೆದ್ದಾರಿ ಉದ್ದಕ್ಕೆ ಒಂದಷ್ಟು ರೋಡ್ ಶೋ ನಡೆಸಲಿದ್ದಾರೆ. ಜೊತೆಗೆ ಇದೇ ಏಪ್ರಿಲ್ 29ಕ್ಕೆ ಮಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಲಮಿಸಲಿದ್ದು, ಉರ್ವಾದಿಂದ ನಾರಾಯಣ ಗುರು ವೃತ್ತದವರೆಗೆ ರೋಡ್ ನಡೆಸಲಿದ್ದಾರೆ. ತೆರೆದ ವಾಹನದಲ್ಲಿ ಅಮಿತ್ ಶಾ ಮೆರವಣಿಗೆ ತೆರಳಲಿದ್ದು, ಸಾವಿರಾರು ಕಾರ್ಯಕರ್ತರು ಸೇರಲಿದ್ದಾರೆ. ತೆರೆದ ವಾಹನದಲ್ಲಿ ಕಾರ್ಯಕರ್ತರನ್ನು ಉದ್ದೆಶಿಸಿ ಶಾ ಮಾತನಾಡಲಿದ್ದಾರೆ.
ಈ ತಿಂಗಳು ಚುನಾವಣಾ ಪ್ರಚಾರ ಕಣಕ್ಕೆ ಇಳಿಯಲಿರುವ ಪ್ರಧಾನಿ ಮೋದಿ ಏಪ್ರಿಲ್ 29 ರಿಂದ ಮೇ 7ರ ವರೆಗೆ ರಾಜ್ಯದ ಹಲವು ಭಾಗಗಳಲ್ಲಿ ರೋಡ್ ಶೋಗಳು ಮತ್ತು ರ‍್ಯಾಲಿಗಳ ಮೂಲಕ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಈ ಆರು ದಿನಗಳ ಅಂತರದಲ್ಲಿ 20 ಕ್ಕೂ ಹೆಚ್ಚು ರೋಡ್ ಶೋಗಳು, ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಮುಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.