ವಾಹನ ಸವಾರರೇ ಎಚ್ಚರ…! ಇಲ್ಲಿ ಹಗಲೊತ್ತಲ್ಲೂ ರಸ್ತೆಗೆ ಅಡ್ಡಬರುತ್ತೆ ಕಾಡಾನೆ! ಚಾರ್ಮಾಡಿ ಘಾಟಿಯಲ್ಲಿ ಮುಂಜಾಗ್ರತೆಯಿಂದ ಸಂಚರಿಸುವಂತೆ ಸೂಚನೆ
ಬೆಳ್ತಂಗಡಿ, ಎ. 27: ಇಂದು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಚಾರ್ಮಾಡಿ ಘಾಟಿಯ 7ನೇ ತಿರುವಿನ ಬಳಿ ಕಾಡಾನೆ ವಾಹನ ಸವಾರರಿಗೆ ಕಂಡು ಬಂದಿದೆ.
ಒಂಟಿಸಲಗವು ರಸ್ತೆ ದಾಟುತ್ತಿದ್ದ ಕಾರಣ ಎರಡು ಕಡೆ ಸ್ವಲ್ಪ ಹೊತ್ತು ವಾಹನಗಳು ಸಾಲುಗಟ್ಟಿ ನಿಂತವು. ಈ ವೇಳೆ ವಾಹನ ಸವಾರರು ನಿರಂತರ ಹಾರ್ನ್ ಬಾರಿಸಿ ಕೆಲವರು ಫೋಟೋ ತೆಗೆಯಲು ಮುಂದಾದಾಗ ಆನೆ ಒಂದಿಷ್ಟು ಆಕ್ರೋಶಗೊಂಡ ಘಟನೆ ನಡೆದಿರುವ ಕುರಿತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಗಲೊತ್ತಲ್ಲೂ ಘಾಟಿ ರಸ್ತೆ ಬದಿ ಒಂಟಿ ಸಲಗ ಕಂಡುಬಂದಿರುವುದು ವಾಹನ ಸವಾರರಲ್ಲಿ ಭೀತಿ ಮೂಡಿಸಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದಿರುವ ಚಾರ್ಮಾಡಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಅಧಿಕಾರಿಗಳಿಗೆ ಆನೆ ಸಂಚರಿಸಿರುವ ಕುರುಹು ಕಂಡು ಬಂದಿದೆ.
ಚಾರ್ಮಾಡಿ ಘಾಟಿ ಪರಿಸರವು ಅರಣ್ಯ ಪ್ರದೇಶದಲ್ಲಿದ್ದು, ಇಲ್ಲಿ ಹಲವಾರು ವನ್ಯಜೀವಿಗಳು ವಾಸಿಸುತ್ತವೆ. ಸಾಮಾನ್ಯವಾಗಿ ರಾತ್ರಿ ವೇಳೆ ರಸ್ತೆಯ ಅಲ್ಲಲ್ಲಿ ಆಗಾಗ ಇವು ವಾಹನ ಸವಾರರಿಗೆ ಕಾಣಿಸಿಗುತ್ತವೆ.ಆದರೆ ಇದೀಗ ಹಗಲಿನ ವೇಳೆ ಕಾಡಾನೆ ರಸ್ತೆಯಲ್ಲಿ ಸಂಚರಿಸುವುದು ಕಂಡುಬಂದಿದೆ. ಈ ಕಾರಣದಿಂದ ವಾಹನ ಸವಾರರು ಹೆಚ್ಚಿನ ಮುಂಜಾಗ್ರತೆಯಿಂದ ಘಾಟಿ ರಸ್ತೆಯಲ್ಲಿ ಸಂಚರಿಸಬೇಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.
ಘಾಟಿ ಪರಿಸರದಲ್ಲಿ ಇತ್ತೀಚೆಗೆ ಕಾಡ್ಗಿಚ್ಚು ಕಂಡುಬಂದಿದ್ದು, ಈ ವೇಳೆ ಹಲವಾರು ವನ್ಯಮೃಗಗಳು ತಮ್ಮ ನೆಲೆಯನ್ನು ಕಳೆದುಕೊಂಡಿವೆ. ಅಲ್ಲದೆ ಬಿರು ಬೇಸಿಗೆಯ ಪರಿಣಾಮ ಕಾಡುಪ್ರಾಣಿಗಳಿಗೆ ನೀರಿನ ಅಭಾವವು ಇರುವುದರಿಂದ ಇವು ಘಾಟಿಯುದಕ್ಕೂ ನೀರು, ಆಹಾರ ಅರಸಿ ಸಂಚರಿಸುತ್ತಿರುವ ಸಾಧ್ಯತೆ ಇದೆ.