ಹಿಂದುತ್ವದ ಪ್ರಯೋಗ ಶಾಲೆಯಲ್ಲಿ ಹಿಂದೂ ಮುಖಂಡರಿಂದಲೇ ಬಿಜೆಪಿ ಗಢಗಢ…!
ಹಿಂದಿನ ಸರಕಾರ ಅಧಿಕಾರದಲ್ಲಿದ್ದಾಗ ಕರಾವಳಿಯ ಎರಡು ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಹಿಂದುತ್ವದ ಪ್ರಯೋಗ ಶಾಲೆ ಎಂದೂ ಕರೆಯಲು ಆರಂಭವಾಯಿತು. ಕಾರಣ, ಸಾಲುಸಾಲು ಅಹಿತಕರ ಘಟನೆಗಳು, ದ್ವೇಷ ಭಾಷಣ, ಕೋಮು ಸೂಕ್ಷ್ಮ ಘಟನೆಗಳು.
ಚುನಾವಣೆಯಲ್ಲಿ ಅವಳಿ ಜಿಲ್ಲೆಗಳ ಹದಿಮೂರು ಕ್ಷೇತ್ರಗಳಲ್ಲಿ ಹನ್ನೆರಡು ಕ್ಷೇತ್ರವನ್ನು ಬಿಜೆಪಿ ಗೆಲ್ಲುವ ಮೂಲಕ, ಕಾಂಗ್ರೆಸ್ಸಿಗೆ ಭರ್ಜರಿ ಠಕ್ಕರ್ ನೀಡಿತ್ತು. ಹಿಂದುತ್ವದ ವಿಚಾರವನ್ನೇ ಮುಂದಿಟ್ಟುಕೊಂಡು ಹೋಗಿದ್ದ ಬಿಜೆಪಿಗೆ ಮತದಾರ ಭರ್ಜರಿಯಾಗಿಯೇ ಆಶೀರ್ವದಿಸಿ ಕಳುಹಿಸಿದ್ದ.
ಮುಂಬರುವ ಚುನಾವಣೆಯಲ್ಲೂ ಈ ಎರಡು ಜಿಲ್ಲೆಗಳಲ್ಲಿ ಬಿಜೆಪಿಗೆ ಅದೇ ಅನುಕೂಲಕರ ಪರಿಸ್ಥಿತಿಯಿದೆಯಾ ಎಂದಾಗ ಇಲ್ಲ ಎನ್ನುವುದು ಸದ್ಯದ ಸ್ಥಳೀಯ ಚಿತ್ರಣ. ಒಂದು ಆಡಳಿತ ವಿರೋಧಿ ಅಲೆ, ಇನ್ನೊಂದು ಹೊಸ ಮುಖಗಳಿಗೆ ಟಿಕೆಟ್ ಕೊಟ್ಟಿದ್ದು, ಮತ್ತೊಂದು ಹಿಂದೂಪರ ಸಂಘಟನೆಯ ಮುಖಂಡರು ಬಿಜೆಪಿ ವಿರುದ್ದ ತೊಡೆ ತಟ್ಟಿದ್ದು. ಕಳೆದ ಬಾರಿ ಈ ಭಾಗದಿಂದ ಗೆದ್ದಿದ್ದ ಹನ್ನೆರಡು ಜನರ ಪೈಕಿ ಆರು ಜನರಿಗೆ ಮಾತ್ರ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ. ಟಿಕೆಟ್ ಕೈತಪ್ಪಿದವರು ಮೇಲ್ನೋಟಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದರೂ, ಹಿಂದೂಪರ ಸಂಘಟನೆಗಳು ಅದೇ ಹುಮ್ಮಸ್ಸಿನಲ್ಲಿ ಕಮಲದ ಅಭ್ಯರ್ಥಿ ಪರ ನಿಂತಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.
ಪುತ್ತೂರಿನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಈಗ ಪಕ್ಷದ ವಿರುದ್ದ ತಿರುಗಿಬಿದ್ದಿದ್ದಾರೆ. ಬಿಜೆಪಿಯ ಗ್ರಾಸ್ ರೂಟ್ ಕಾರ್ಯಕರ್ತರಾಗಿದ್ದ ಪುತ್ತಿಲ ಅವರು ಸಂಘ ಪರಿವಾರದ ಯಾವುದೇ ಮುಖಂಡರ ಒತ್ತಡಕ್ಕೆ ಮಣಿಯದೇ ಕಣದಲ್ಲಿ ಪಕ್ಷೇತರರಾಗಿ ಮುಂದುವರಿದಿದ್ದಾರೆ. ಇದು, ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ.
ಪುತ್ತಿಲ ಅವರ ನಾಮಿನೇಶನ್ ಫೈಲಿಂಗ್
ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಿಂತಲೂ ದೊಡ್ಡ ಪ್ರಮಾಣದಲ್ಲಿ ಪುತ್ತಿಲ ಅವರ ನಾಮಿನೇಶನ್ ಫೈಲಿಂಗಿಗೆ ಜನ ಸೇರಿದ್ದರು ಎನ್ನುವುದು ಗಮನಿಸಬೇಕಾದ ವಿಚಾರ. ಸ್ಥಳೀಯ ಮಟ್ಟದಲ್ಲಿ ಪ್ರಭಾವೀ ಮುಖಂಡರಾಗಿರುವ ಪುತ್ತಿಲ ಅವರ ಸ್ಪರ್ಧೆಯಿಂದ ಇದು ನೇರವಾಗಿ ಬಿಜೆಪಿ ಮತಬ್ಯಾಂಕಿಗೆ ಏಟು ಬೀಳಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪುತ್ತೂರಿನಲ್ಲಿ ಬಿಜೆಪಿಯಿಂದ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಿದೆ.
ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪಕ್ಷೇತರರಾಗಿ ಕಣದಲ್ಲಿ
ಇನ್ನು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಅವರನ್ನು ಸೋಲಿಸುವಷ್ಟು ಮುತಾಲಿಕ್ ಪ್ರಭಲರಲ್ಲದೇ ಇದ್ದರೂ ಮತವಿಭಜನೆ ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿಲ್ಲದಿಲ್ಲ. ಅರುಣ್ ಕುಮಾರ್ ಪುತ್ತಿಲ ಮತ್ತು ಮುತಾಲಿಕ್ ಸ್ಪರ್ಧೆಯ ಕಾವು ಬರೀ ಎರಡು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಖಟ್ಟರ್ ಹಿಂದೂತ್ವವಾದಿಗಳು ಅವಳಿ ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಬಿಜೆಪಿ ವಿರುದ್ದ ಮತಚಲಾಯಿಸುವ ಭೀತಿಯೂ ಬಿಜೆಪಿಯನ್ನು ಕಾಡುತ್ತಿರುವಂತಿದೆ.
“ನನ್ನ ಜೀವನಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ನಳಿನ್ ಕಟೀಲ್ ಅವರೇ ಕಾರಣ” ಎಂದು ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಚುನಾವಣೆಯ ವೇಳೆ ನೇರವಾಗಿ ಆರೋಪಿಸಿದ್ದೂ ಪಕ್ಷಕ್ಕೆ ಹೊಡೆತ ನೀಡಲೂ ಬಹುದು.
ಐದು ವರ್ಷದ ಹಿಂದಿನ ಚುನಾವಣೆಗೂ ಮುಂಬರುವ ಚುನಾವಣೆಗೂ ಹೋಲಿಸಿದರೆ..
ಒಟ್ಟಾರೆಯಾಗಿ ಐದು ವರ್ಷದ ಹಿಂದಿನ ಚುನಾವಣೆಗೂ ಮುಂಬರುವ ಚುನಾವಣೆಗೂ ಹೋಲಿಸಿದರೆ ಅವಳಿ ಜಿಲ್ಲೆಗಳ ಚಿತ್ರಣ ಬದಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಮುಖ ಎದುರಾಳಿ ಕಾಂಗ್ರೆಸ್ ಅನ್ನು ಎದುರಿಸುವುದರ ಜೊತೆಗೆ ತಾವೇ ಬೆಳೆಸಿದ ಹಿಂದೂ ಸಂಘಟನೆಯ ನಾಯಕರ ವಿರುದ್ದವೂ ಹೋರಾಡುವ ಅನಿವಾರ್ಯತೆಗೆ ಬಿಜೆಪಿಗೆ ಬಿದ್ದಿದೆ. ಈ ಎಲ್ಲಾ ಕಾರಣಗಳಿಂದ 2018ರಲ್ಲಿ ಬಂದಂತಹ ಫಲಿತಾಂಶವನ್ನು ಈ ಬಾರಿಯೂ ಬಿಜೆಪಿ ನಿರೀಕ್ಷಿಸಲು ಸಾಧ್ಯವೇ ಎನ್ನುವುದಿಲ್ಲಿ ಪ್ರಶ್ನೆಗೆ ಮೇ ಹದಿಮೂರರಂದು ಉತ್ತರ ಸಿಗಲಿದೆ.
source-oneindia