ಬೆಳ್ತಂಗಡಿಯಲ್ಲಿ ರೂ. ೧೨ ಕೋಟಿ ವೆಚ್ಚದಲ್ಲಿ ಕೆಎಎಸ್‌ಆರ್‌ಟಿಸಿ ಬಸ್ ತಂಗುದಾಣ: ಶಾಸಕ ಹರೀಶ್ ಪೂಂಜ
ವೇಣೂರು: ತಾಲೂಕು ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ತಂಗುದಾಣ ಇಲ್ಲ ಎಂದು ನಾಚಿಕೆ ಪಟ್ಟುಕೊಳ್ಳುವ ಸಮಯ ಕಳೆದುಹೋಗಿದೆ. ತಾಲೂಕು ಕೇಂದ್ರ ಭಾಗದಲ್ಲೇ ವಿವಿಧ ಇಲಾಖೆಗೆ ಸಂಬಂಧಿತ ೧.೨೦ ಎಕ್ರೆ ಜಾಗವನ್ನು ಒಟ್ಟು ಮಾಡಿ ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸುವ ಪ್ರಕ್ರಿಯೆ ಮುಗಿದು ಬೊಮ್ಮಾಯಿ ಸರಕಾರ ರೂ. ೧೨ ಕೋಟಿ ಅನುದಾನ ಒದಗಿಸಿ ಕೆಲಸಕಾರ್ಯ ಆರಂಭವಾಗಿದ್ದು, ಬಹುದೊಡ್ಡ ಸವಾಲಿನ ಕಾರ್ಯ ಇದಾಗಿತ್ತು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ವೇಣೂರು ಮುಖ್ಯಪೇಟೆಯಲ್ಲಿ ರೂ. ೧.೮೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಮಾದರಿ ವಾಣಿಜ್ಯ ಸಂಕೀರ್ಣ ಸಹಿತ ಬಸ್ ತಂಗುದಾಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ರಾಜ್ಯದ ಯಾವುದೇ ಗ್ರಾ.ಪಂ. ವ್ಯಾಪ್ತಿಯಲ್ಲಿರದ ವ್ಯವಸ್ಥಿತ ಬಸ್ ತಂಗುದಾಣ ಇಲ್ಲಿ ಆಗಿದೆ. ತಾಲೂಕಿನಲ್ಲಿ ಗ್ರಂಥಾಲಯಗಳ ಸ್ಥಿತಿಗತಿ ಶೋಚನೀಯವಾಗಿತ್ತು. ಅದಕ್ಕಾಗಿ ಬೆಳ್ತಂಗಡಿ ಜ್ಯೂನಿಯರ್ ಕಾಲೇಜು ಬಳಿ ರೂ. ೨ ಕೋಟಿ ವೆಚ್ಚದಲ್ಲಿ ಅತ್ಯಂತ ಆಕರ್ಷಣೀಯ ಸಾರ್ವಜನಿಕ ಗ್ರಂಥಾಲಯ ನಿರ್ಮಾಣವಾಗುತ್ತಿದೆ. ತಾ.ನ ಸಮಗ್ರ ಅಭಿವೃದ್ಧಿಗೆ ತಾಲೂಕಿಗೆ ರೂ. ೩೫೦೦ ಕೋಟಿ ಅನುದಾನ ಒದಗಿಸಲಾಗಿದೆ. ಅದು ನಿಮ್ಮ ಮತದಾನಗಳಿಂದ ಸಾಧ್ಯವಾಗಿದೆ. ಮುಂದಿನ ಅವಧಿಗೆ ಅವಕಾಶ ದೊರೆತರೆ ದೇಶದಲ್ಲೇ ಬೆಳ್ತಂಗಡಿಯನ್ನು ಮಾದರಿ ತಾಲೂಕನ್ನಾಗಿ ಮಾಡುತ್ತೇನೆ. ವೇಣೂರು ವೇಣೂರು ದೇಗುಲಕ್ಕೆ ರೂ. ೧.೫ ಕೋಟಿ ಅನುದಾನ ಒದಗಿಸಿದ್ದು, ಇದೀಗ ಮತ್ತೆ ರೂ. ೪೦ ಲಕ್ಷ ಅನುದಾನ ಒದಗಿಸಲಾಗಿದೆ. ಚರ್ಚ್‌ನ ಸಮುದಾಯ ಭವನಕ್ಕೆ ರೂ. ೨೫ ಲಕ್ಷ ನೀಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶ್ರೀರಾಮ ನಗರದ ರಿಕ್ಷಾ ನಿಲ್ದಾಣದ ಉದ್ಘಾಟನೆ ಹಾಗೂ ಬಂಟ್ವಾಳ ಕ್ರಾಸ್ ಬಳಿ ರಿಕ್ಷಾ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಗ್ರಾ.ಪಂ. ವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳು ಶಾಸಕರನ್ನು ಸಮ್ಮಾನಿಸಿದರು.
ಹಾಗೂ ಗ್ರಾ.ಪಂ. ವತಿಯಿಂದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ. ಅವರನ್ನು ಸಮ್ಮಾನಿಸಲಾಯಿತು. ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಪಂ. ಉಪಾಧ್ಯಕ್ಷೆ ಪುಷ್ಪಾ ಡಿ., ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಮುಖರಾದ ಕೆ. ಭಾಸ್ಕರ ಪೈ, ಪುರುಷೋತ್ತಮ ರಾವ್, ಗಿರೀಶ್ ಕೆ.ಎಚ್., ಯಂ. ವಿಜಯರಾಜ ಅಧಿಕಾರಿ, ಸುರೇಶ್ ಆರಿಗ ಪೆರ್ಮಾಣು, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂ. ಸದಸ್ಯ ಲೋಕಯ್ಯ ಪೂಜಾರಿ ಸ್ವಾಗತಿಸಿ, ಅರುಣ್ ಕ್ರಾಸ್ತ ಪ್ರಾಸ್ತವಿಸಿದರು. ಅನೂಪ್ ಜೆ. ಪಾಯಸ್ ನಿರೂಪಿಸಿ, ಪಿಡಿಒ ನಾಗೇಶ್ ಎಂ. ವಂದಿಸಿದರು.