ಮಂಗಳೂರು: 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಯುವಕ ದಾರುಣ ಸಾವು
ಮಂಗಳೂರು: ಹೊಸತಾಗಿ ಎಸಿ ಮೆಷಿನ್ ಕನೆಕ್ಟ್ ಮಾಡುತ್ತಿದ್ದ ವೇಳೆ ಬಹುಮಹಡಿ ಕಟ್ಟಡದ 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಯುವಕನೋರ್ವನು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಜೆ 6 ಗಂಟೆ ನಗರದ ನಂತೂರಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ತಾವೋ(23) ಮೃತಪಟ್ಟ ದುರ್ದೈವಿ. ವಿನಯ್ ತಾವ್ರೋ ನಂತೂರಿನ ಹಮಾರಾ ರೆಫ್ರಿಜರೇಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಇಂದು ನಂತೂರಿನಲ್ಲಿರುವ ಮೌಂಟ್ ಟಿಯಾರಾ ಅಪಾರ್ಟೆಂಟ್ ನಲ್ಲಿ ಹೊಸದಾಗಿ ಎಸಿ ಮೆಷಿನ್ ಕನೆಕ್ಟ್ ಮಾಡಲು ತೆರಳಿದ್ದರು. ಈ ಅಪಾರ್ಟ್ ಮೆಂಟ್ ನ 9ನೇ ಮಹಡಿಯ ಮನೆಯ ಆವರಣ ಗೋಡೆಯ ಹೊರಭಾಗದಲ್ಲಿ ವಿನಯ್ ತಾವ್ರೋ ಹಾಗೂ ಮತ್ತೋರ್ವ ಯುವಕ ಮೆಷಿನ್ ಫಿಟ್ ಮಾಡುತ್ತಿದ್ದರು. ಈ ವೇಳೆ ವಿನಯ್ ಏಕಾಏಕಿ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಯುವಕನ ತಲೆ ಒಡೆದು ರಕ್ತಸ್ರಾವದಿಂದ ಮೃತನಾಗಿದ್ದಾನೆ. ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿದ್ದು ವಿನಯ್ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ವಿನಯ್ ಇತ್ತೀಚೆಗಷ್ಟೆ ಎಸಿ ಕಂಪೆನಿಗೆ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ.